ಮುಂಬೈ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ (Short Circuit) ಅಂಗಡಿಗೆ ಬೆಂಕಿ ತಗುಲಿ ಒಂದೇ ಕುಟುಂಬದ 7 ಜನರು ಸಜೀವ ದಹನಗೊಂಡಿರುವ ಘಟನೆ ಮುಂಬೈನ (Mumbai) ಸಿದ್ದಾರ್ಥ ಕಾಲೋನಿಯ ಕೆಎನ್ ಗಾಯಕ್ವಾಡ್ ಮಾರ್ಗದಲ್ಲಿದ್ದ ಚೇಂಬೂರ್ ಅಂಗಡಿಯಲ್ಲಿ ನಡೆದಿದೆ.
ಮೃತ ಏಳು ಜನರ ಪೈಕಿ ಮೂವರು ಮಕ್ಕಳಿದ್ದು, ಒಂದೇ ಕುಟುಂಬದವರು. ಮೃತರನ್ನು ಪ್ರೆಸಿ ಗುಪ್ತಾ (6), ಮಂಜು ಗುಪ್ತಾ (30), ಅನಿತಾ ಧರಮದೇವ್ ಗುಪ್ತಾ (39), ಪ್ರೇಮ ಚೇಡಿರಾಮ್ ಗುಪ್ತಾ (30), ನರೇಂದ್ರ ಗುಪ್ತಾ (10), ವಿಧಿ ಚೇಡಿರಾಮ್ ಗುಪ್ತಾ (15), ಗೀತಾದೇವಿ ಧರಮ್ದೇವ್ ಗುಪ್ತಾ (60) ಎಂದು ಗುರುತಿಸಲಾಗಿದೆ
ಭಾನುವಾರ ನಸುಕಿನ ಜಾವ 5.20ರ ಸುಮಾರಿಗೆ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 7 ಜನರು ಸಜೀವ ದಹನಗೊಂಡಿದ್ದಾರೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು (BMMC) ತಿಳಿಸಿದ್ದಾರೆ.
ವಲಯ ಡಿಸಿಪಿ ಹೇಮರಾಜ್ ಸಿಂಗ್ ರಜಪೂತ್ (DCP Hemraj Singh Rajaput) ಮಾತನಾಡಿ, ಬೆಳಿಗ್ಗೆ 6 ರ ಸುಮಾರಿಗೆ ಕರೆಯೊಂದು ಬಂದಿತ್ತು. ಸ್ಥಳಕ್ಕೆ ಧಾವಿಸಿದಾಗ ಕಟ್ಟಡದ ಎರಡು ಮಹಡಿಯಲ್ಲಿ ವಾಸಿಸುತ್ತಿದ್ದ ಕುಟುಂಬದ 7 ಜನರು ಸಾವನ್ನಪ್ಪಿದ್ದು, ನೆಲಮಹಡಿಯಲ್ಲಿದ್ದ 2 ಪಾರಾಗಿದ್ದಾರೆ. ಸದ್ಯ ನಮ್ಮ ತಂಡ ಹಾಗೂ ಅಗ್ನಿಶಾಮಕ ದಳವು (Fire Brigade) ತನಿಖೆ ನಡೆಸುತ್ತಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ತಿಳಿಸಿದರು.
ಅಂಗಡಿಯ ಬಳಿ ಅಳವಡಿಸಿದ್ದ ವಿದ್ಯುತ್ ವೈರ್ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. 3 ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೋಲಿಸರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಪಕ್ಕದ ಮನೆಗೆ ಬೆಂಕಿ ಆವರಿಸಿಕೊಂಡಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ