ದೆಹಲಿಯ ಡಾಕ್ಟರ್ ಕರುಣಿಸಿಂಗ್ ಶೂಟಿಂಗ್ ರೇಂಜ್ನಲ್ಲಿ ನಡೆಯಲಿರುವ ಡಿ. 12ರಿಂದ 16ರವರೆಗೆ ನಡೆಯಲಿರುವ ಖೇಲೋ ಇಂಡಿಯಾ ಪ್ರಥಮ ಪ್ಯಾರಾ ಗೇಮ್ಸ್ನ ಶೂಟಿಂಗ್ ಸ್ಪರ್ಧೆಗೆ ರಾಜ್ಯದ ಐವರು ಶೂಟರ್ಸ್ಗಳು ಆಯ್ಕೆಯಾಗಿದ್ದಾರೆ. ಆ ಪೈಕಿ ನಾಲ್ವರು ಶೂಟರ್ಗಳು ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಕ್ರೀಡಾಪಟುಗಳಾಗಿದ್ದಾರೆ.
ಜ್ಯೋತಿ ಸಣ್ಣಕ್ಕಿ, ಶಂಕರಲಿಂಗ ತವಳಿ, ರಾಕೇಶ ನಿಡಗುಂದಿ, ಸಚಿನ್ ಸಿದ್ದಣ್ಣವರ, ಶ್ರೀಹರ್ಷ ದೇವರೆಡ್ಡಿ ಇವರೆಲ್ಲರೂ ರೈಫಲ್ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಖೇಲೋ ಇಂಡಿಯಾ ಗೇಮ್ಸ್ನಲ್ಲಿ ಸಾಮಾನ್ಯ ಕ್ರೀಡಾಪಟು ಮಾತ್ರ ಭಾಗವಹಿಸಲು ಅವಕಾಶವಿತ್ತು. ಆದರೆ, ಇದೇ ಮೊದಲ ಬಾರಿಗೆ ಅಂಗವಿಕಲ ಕ್ರೀಡಾಪಟುಗಳಿಗೂ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಅನ್ನು ಪ್ರಥಮ ಬಾರಿಗೆ ಭಾರತದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಅತ್ಯುತ್ತಮ ಪ್ರದರ್ಶನ ಮತ್ತು ಪದಕ ಪಡೆದ ಕ್ರೀಡಾಪಟುಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ ಎಂದು ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ತರಬೇತುದಾರ, ಮಾಜಿ ಸೈನಿಕ ರವಿಚಂದ್ರ ಬಾಲೆಹೊಸೂರ ತಿಳಿಸಿದ್ದಾರೆ.
ರಾಜ್ಯದಿಂದ ಖೇಲೋ ಇಂಡಿಯಾ ಪ್ರಥಮ ಪ್ಯಾರಾ ಗೇಮ್ಸ್ನಲ್ಲಿ ಭಾಗವಹಿಸುತ್ತಿರುವ ಅಂಗವಿಕಲ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ, ರಾಜ್ಯಕ್ಕೆ ಹೆಚ್ಚು ಪದಕ ಗೆದ್ದು ತರಲಿ ಎಂದು ಕರ್ನಾಟಕ ಅಂಗವಿಕಲರ ಕ್ರೀಡಾ ಸಂಸ್ಥೆ ಅಧ್ಯಕ್ಷ ಮಹಾದೇವ, ಕಾರ್ಯದರ್ಶಿ ಮಹೇಶಗೌಡ ಶುಭ ಕೊರಿದ್ದಾರೆ.