ಪ್ಯಾರಿಸ್: ಒಲಿಂಪಿಕ್ಸ್ನ (Paris Olympics) ಬ್ಯಾಡ್ಮಿಂಟನ್ (Badminton) ಸಿಂಗಲ್ಸ್ನ ಗುಂಪು ಹಂತದ ಪಂದ್ಯದಲ್ಲಿ ಲಕ್ಷ್ಯ ಸೇನ್ (Lakshya Sen) ಶುಭಾರಂಭ ಮಾಡಿದ್ದರೂ ಆ ಗೆಲುವನ್ನು ‘ಡಿಲೀಟ್’ ಮಾಡಲಾಗಿದೆ.
ಶನಿವಾರ ಗ್ವಾಟೆಮಾಲಾದ ಆಟಗಾರ ಕಾರ್ಡನ್ ಕೆವಿನ್ ಅವರನ್ನು ಲಕ್ಷ್ಯ ಸೆನ್ ನೇರ ಸೆಟ್ಗಳಿಂದ ಸೋಲಿಸಿದ್ದರು. ಮೊದಲ ಸೆಟ್ ಅನ್ನು 21-8 ರಿಂದ ಸುಲಭವಾಗಿ ಗೆದ್ದುಕೊಂಡ ಸೇನ್ ಎರಡನೇ ಸೆಟ್ ನಲ್ಲಿ ಕಠಿಣ ಹೋರಾಟ ಮಾಡಿ ಅಂತಿಮವಾಗಿ 22-20 ರಿಂದ ಗೆದ್ದು ಬೀಗಿದ್ದರು.
ಈ ಪಂದ್ಯವನ್ನು ಗೆದ್ದರೂ ಲಕ್ಷ್ಯ ಸೇನ್ ಗೆಲುವನ್ನು ಟೂರ್ನಿಯಿಂದ ಡಿಲೀಟ್ ಮಾಡಲಾಗಿದೆ. ಎಡ ಮೊಣಕೈ ಗಾಯದಿಂದಾಗಿ ಕಾರ್ಡನ್ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ನಿಂದ ಹಿಂದೆ ಸರಿದಿದ್ದರಿಂದ ಬಿಡಬ್ಲ್ಯೂಎಫ್ (BWF) ನಿಯಮಗಳಿಗೆ ಅನುಸಾರವಾಗಿ, ಲಕ್ಷ್ಯ ಮತ್ತು ಕಾರ್ಡನ್ ನಡುವಿನ ಪಂದ್ಯವನ್ನು ಡಿಲೀಟ್ ಮಾಡಲಾಗಿದೆ.
ಲಕ್ಷ್ಯ ಅವರ ಶ್ರೇಯಾಂಕವು ಗುಂಪು L ಪಂದ್ಯಗಳ ಫಲಿತಾಂಶಗಳನ್ನು ಆಧರಿಸಿ ನಿರ್ಧಾರವಾಗಲಿದೆ. ಇಂದು ಜೂಲಿಯನ್ ಕಾರ್ರಾಗಿ ವಿರುದ್ಧ ಲಕ್ಷ್ಯ ಸೆನ್ ಆಡಲಿದ್ದಾರೆ.
ವಿರಾಟ್ ಕೊಹ್ಲಿ ಸ್ಥಾನಕ್ಕೆ ಬೆಸ್ಟ್ ಆಯ್ಕೆ ಯಾರೆಂದು ಸೂಚಿಸಿದ ರಾಬಿನ್ ಉತ್ತಪ್ಪ!
ಡಿಲೀಟ್ ಮಾಡಿದ್ದು ಯಾಕೆ?
ಬಿಡಬ್ಲ್ಯೂಎಫ್ ನಿಯಮದ ಪ್ರಕಾರ ಲೀಗ್ನಲ್ಲಿದ್ದ ಓರ್ವ ಆಟಗಾರ ಮಧ್ಯದಲ್ಲೇ ಹಿಂದಕ್ಕೆ ಸರಿದರೆ ಆಟಗಾರ ಆಡಿದ ಮತ್ತು ಆಡಲಿರುವ ಎಲ್ಲಾ ಪಂದ್ಯಗಳನ್ನು ರದ್ದು ಮಾಡಲಾಗುತ್ತದೆ.
ಲಕ್ಷ್ಯ ಸೆನ್ ಇರುವ ಎಲ್ ಗುಂಪಿನಲ್ಲಿ ನಾಲ್ವರು ಆಟಗಾರಿದ್ದರು. ಕಾರ್ಡನ್ ಕೆವಿನ್ ಆಟದಿಂದ ಹಿಂದೆ ಸರಿದ ಕಾರಣ ಈಗ ಲಕ್ಷ್ಯ ಸೆನ್ ಭವಿಷ್ಯ ಬೆಲ್ಜಿಯಂನ ಜೋಯಲ್ ಕ್ಯಾರಾಗಿ ಮತ್ತು ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ವಿರುದ್ಧ ನಡೆಯುವ ಪಂದ್ಯಗಳ ಮೇಲೆ ನಿಂತಿದೆ
ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲು ಉಳಿದ ಎಲ್ಲಾ 2 ಪಂದ್ಯಗಳನ್ನು ಗೆಲ್ಲಬೇಕು. ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರು ಮೂರನೇ ಶ್ರೇಯಾಂಕ ಹೊಂದಿದ್ದು ಚಿನ್ನದ ಪದಕ ಗೆಲ್ಲುವ ನೆಚ್ಚಿನವರಲ್ಲಿ ಒಬ್ಬರಾಗಿದ್ದಾರೆ.
22 ವರ್ಷದ ಲಕ್ಷ್ಯ ಸೆನ್ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ಮತ್ತು ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 2022 ರಲ್ಲಿ ಥಾಮಸ್ ಕಪ್ ಗೆದ್ದ ಐತಿಹಾಸಿಕ ಭಾರತೀಯ ತಂಡದ ಭಾಗವಾಗಿದ್ದರು ಮತ್ತು ಆಲ್-ಇಂಗ್ಲೆಂಡ್ ಓಪನ್ನ ಫೈನಲ್ಗೆ ಅರ್ಹತೆ ಪಡೆದ ನಾಲ್ಕು ಭಾರತೀಯ ಪುರುಷರಲ್ಲಿ ಒಬ್ಬರಾಗಿದ್ದಾರೆ.