ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಇಂದು ಮುಂಜಾನೆ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್ ಎಂ ಕೃಷ್ಣ ಚಿಕಿತ್ಸೆ ಫಲಕಾಗಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹಲವರು ಮೃತ ಎಸ್ ಎಂ ಕೃಷ್ಣರ ಪಾರ್ಥೀವ ಶರೀರದ ದರ್ಶನ ಪಡೆದಿದ್ದಾರೆ. ಅದರಂತೆ ನಟ ಶಿವರಾಜ್ ಕುಮಾರ್ ಕೂಡ ದರ್ಶನ್ ಪಡೆದು ದೊಡ್ಮನೆ ಜೊತೆಗೆ ಎಸ್ ಎಂ ಕೃಷ್ಣ ಅವರಿಗೆ ಇದ್ದ ಬಾಂಧವ್ಯವನ್ನು ತಿಳಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅನಾರೋಗ್ಯದ ನಡುವೆಯೂ ಇಂದು ನಿಧನರಾದ ಎಸ್ಎಂ ಕೃಷ್ಣ ಅವರಿಗೆ ಅಂತಿಮ ದರ್ಶನಕ್ಕೆಂದು ಆಗಮಿಸಿದ್ದರು. ಈ ವೇಳೆ ಕೃಷ್ಣ ಅವರ ಬಗ್ಗೆ ಮಾತನಾಡಿದ್ದಾರೆ.
‘ಕೃಷ್ಣ ಅವರೆಂದರೆ ತಂದೆಯವರಿಗೆ (ರಾಜ್ಕುಮಾರ್) ಹಾಗೂ ನಮ್ಮ ಕುಟುಂಬಕ್ಕೆ ವಿಶೇಷ ಗೌರವ. ನಮ್ಮ ತಂದೆಯವರು ಯಾವಾಗಲೂ ಹೇಳುತ್ತಿದ್ದರು ಒಬ್ಬ ಸೊಫೆಸ್ಟಿಕೇಟೆಡ್ ವ್ಯಕ್ತಿಯೆಂದರೆ ಅದು ಎಸ್ಎಂ ಕೃಷ್ಣ ರೀತಿಯಾಗಿರಬೇಕು ಎಂದು. ಶಿಸ್ತಿನ ಜೀವನ ನಡೆಸಿದರು, ಶಿಸ್ತಿನ ವ್ಯಕ್ತಿತ್ವ ಅವರದ್ದು. ಅಂತಹಾ ವ್ಯಕ್ತಿಗಳು ಬಹಳ ಅಪರೂಪ. ವೈಯಕ್ತಿಕವಾಗಿಯೂ ನಮಗೆ ಸಹ ಅವರೊಟ್ಟಿಗೆ ಬಹಳ ಆತ್ಮೀಯತೆ ಇತ್ತು. ಅವರ ಅಳಿಯ ಅವರೊಟ್ಟಿಗೂ ಆತ್ಮೀಯತೆ ಇತ್ತು, ಅವರ ಪತ್ನಿಯವರೊಟ್ಟಿಗೂ ಆತ್ಮೀಯತೆ ಇದೆ’ ಎಂದಿದ್ದಾರೆ ಶಿವರಾಜ್ ಕುಮಾರ್.
‘ಅಪ್ಪಾಜಿ ಅವರನ್ನು ವೀರಪ್ಪನ್ ಅಪಹರಣ ಮಾಡಿದ ಸಂದರ್ಭದಲ್ಲಿ ಕೃಷ್ಣ ಅವರು ನೀಡಿದ ಸಹಾಯವನ್ನು ನಮ್ಮ ಕುಟುಂಬ ಎಂದಿಗೂ ಮರೆಯುವಂತಿಲ್ಲ. ನಮ್ಮ ಕುಟುಂಬಕ್ಕೆ ಅತ್ಯಂತ ಆಪ್ತವಾಗಿದ್ದಾರೆ. ವಯಸ್ಸಾಗಿತ್ತು ಎಂದೆಲ್ಲ ಹೇಳುತ್ತಾರೆ ಆದರೆ ಅಗಲಿದ ನೋವು ಅದನ್ನು ಇಲ್ಲ ಎಂದು ಹೇಳಲಾಗುವುದಿಲ್ಲ. ನೋವು ಆಗಿಯೇ ಆಗುತ್ತದೆ’ ಎಂದಿದ್ದಾರೆ ಶಿವರಾಜ್ ಕುಮಾರ್.
ಡಾ ರಾಜ್ಕುಮಾರ್ ಅವರ ಅಪಹರಣ ಆದ ಸಂದರ್ಭದಲ್ಲಿ ಎಸ್ಎಂ ಕೃಷ್ಣ ಅವರು ಸಿಎಂ ಆಗಿದ್ದರು. ಆ ಸಮಯದಲ್ಲಿ ದೊಡ್ಮನೆ ಕುಟುಂಬದವರು ಬಹುತೇಕ ಪ್ರತಿದಿನವೂ ಸಿಎಂ ಅವರೊಟ್ಟಿಗೆ ಸಂಪರ್ಕದಲ್ಲಿದ್ದರು. ಡಾ ರಾಜ್ಕುಮಾರ್ ಅವರನ್ನು ವೀರಪ್ಪನ್ ಸೆರೆಯಿಂದ ಬಿಡಿಸಿಕೊಂಡು ಬರಲು ಹಲವು ರೀತಿಯ ಪ್ರಯತ್ನಗಳನ್ನು ಕೃಷ್ಣ ಮಾಡಿದರು. 108 ದಿನಗಳ ಬಳಿಕ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಎಸ್ ಎಂ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.