ಇಂದೋರ್: ಅಫ್ಘಾನಿಸ್ತಾನ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಟೀಂ ಇಂಡಿಯಾ ಆಲ್ರೌಂಡರ್ ಶಿವಂ ದುಬೆ (Shivam Dube), ತನ್ನ ಯಶಸ್ಸನ್ನು ಎಂ.ಎಸ್ ಧೋನಿ (MS Dhoni) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅರ್ಪಿಸಿದ್ದಾರೆ.
ನನಗೆ ಸಲ್ಲುತ್ತಿರುವ ಶ್ರೇಯಸ್ಸು, ಸಿಎಸ್ಕೆ ತಂಡ ಮತ್ತು ಮಹಿ ಅಣ್ಣನಿಗೆ ಸಲ್ಲಬೇಕು. ನಾನು ನನ್ನ ಆಟ ಆಡುತಿದ್ದೆ, ಆದರೆ ಸಿಎಸ್ಕೆ ನನ್ನ ನಿಜವಾದ ಪ್ರತಿಭೆಯನ್ನು ಹೊರತಂದಿದೆ. ತಂಡವು ನನ್ನಲ್ಲಿ ಆ ಆತ್ಮವಿಶ್ವಾಸ ತುಂಬಿದೆ. ನಾನು ಐಪಿಎಲ್ನಲ್ಲಿ ರನ್ ಗಳಿಸಲು ಸಾಧ್ಯವಿದೆ ಎಂಬುದನ್ನು ಅವರು ನನಗೆ ಮನವರಿಕೆ ಮಾಡಿದರು. ಅಲ್ಲದೇ ನನ್ನ ಮೇಲೆ ನಂಬಿಕೆ ಇಟ್ಟರು. ಮೈಕ್ ಹಸ್ಸಿ ಮತ್ತು ಫ್ಲೆಮಿಂಗ್ ಅವರಂಥ ಹಿರಿಯರು ನನ್ನ ಮೇಲೆ ನಂಬಿಕೆಯಿಟ್ಟಿದ್ದಾರೆ ಎಂದು ಭಾವುಕರಾಗಿದ್ದಾರೆ.
ನಾನು ಸಿಎಸ್ಕೆ ತಂಡದಲ್ಲಿದ್ದಾಗ, ಮಹಿ ಅಣ್ಣ ನನಗೆ ಚೆನ್ನಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಆದರೆ ಸ್ಮಾರ್ಟ್ ಆಗಿ ಆಡಲು ಅವರು ಹೇಳಿದರು. ಹೀಗಾಗಿ ನಾನು ನನ್ನ ಮಿತಿಗಳನ್ನು ನೋಡಿಕೊಂಡು ಇನ್ನೂ ಉತ್ತಮವಾಗಿ ಆಡಲು ಏನು ಮಾಡಬಹುದು ಎಂಬುದರ ಮೇಲೆ ಗಮನ ಹರಿಸಿದೆ ಎಂದು ತಿಳಿಸಿದ್ದಾರೆ.
ಯುವ ಆಲ್ರೌಂಡರ್ ಶಿವಂ ದುಬೆ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಹಿರಿಯ ಆಟಗಾರರ ಗಮನ ಸೆಳೆದಿದ್ದಾರೆ. ಅಫ್ಘಾನ್ ವಿರುದ್ಧ ಮೊದಲ ಪಂದ್ಯದಲ್ಲಿ 40 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿಗಳೊಂದಿಗೆ 60 ರನ್ ಚಚ್ಚಿದ ದುಬೆ, 2ನೇ ಪಂದ್ಯದಲ್ಲಿ 32 ಎಸೆತಗಳಲ್ಲಿ ಸ್ಫೋಟಕ 63 ರನ್ (4 ಸಿಕ್ಸರ್, 5 ಬೌಂಡರಿ) ಬಾರಿಸಿ ಮಿಂಚಿದ್ದಾರೆ. ಅಲ್ಲದೇ ಎರಡೂ ಪಂದ್ಯಗಳಲ್ಲಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ದಾರೆ. ಜನವರಿ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3ನೇ ಪಂದ್ಯ ನಡೆಯಲಿದ್ದು, ಅಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.