ಬೆಳಗಾವಿ : ಕನ್ನಡ ಮಾತಾಡಿ ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳಿಗೆ ಮಸಿ ಉದ್ಧವ ಠಾಕ್ರೆ ಬಣದ ಶಿವಸೇನೆ ಪುಂಡರು ಮಸಿ ಬಳಿದಿದ್ದು, ಅಲ್ಲದೇ ಬಸ್ ಚಾಲಕರಿಗೆ ಬೆದರಿಕೆ ಹಾಕಿದ್ದಾರೆ. ಮಹಾರಾಷ್ಟ್ರದ ಪುಣೆ ನಗರದ ಸ್ವಾರಗೇಟ್ ಬಳಿ ಪುಂಡಾಟಿಕೆ ವಿಡಿಯೋ ವೈರಲ್ ಆಗುತ್ತಿದೆ.
ಫೆ.22 ರಂದು ರಾತ್ರಿ ಶಿವಸೇನೆ ಪುಂಡರು ನಡು ರಸ್ತೆಯಲ್ಲಿ ಬಲವಂತವಾಗಿ ಬಸ್ ನಿಲ್ಲಿಸಿ ಗೂಂಡಾಗಿರಿ ತೋರಿದ್ದಾರೆ. ವಾಯುವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಸೇರಿದ್ದ ಪುಣೆ ಸಿಂದಗಿ ಬಸ್, ಮುಂಬೈ ಇಳಕಲ್ ಬಸ್ ಗೆ ಕಪ್ಪು ಮಸಿ ಬಳಿದಿದ್ದಾರೆ. ಬಸ್ ಮೇಲಿದ್ದ ಕನ್ನಡ ಅಕ್ಷರಗಳಿಗೆ, ನಂಬರ್ ಪ್ಲೇಟ್ ಗೆ ಕಪ್ಪು ಮಸಿ ಬಳಿದು, ಧಿಕ್ಕಾರ ಚಿನ್ಹೆ ಹಾಕಿ ಪುಂಡಾಟ ಮೆರೆದಿದ್ದಾರೆ.
ಶಿವಸೇನೆ ಪುಂಡರ ಮುಂದೆ ಕರ್ನಾಟಕ ಬಸ್ ಡ್ರೈವರ್ ಗಳು ಕೇಳಿಕೊಂಡರೂ ಸಹ ಮುಂಬೈ ಇಳಕಲ್ ಬಸ್ ಡ್ರೈವರ್ ಗೆ ಮರಾಠಿ ಬರುತ್ತಾ ಎಂದು ಪ್ರಶ್ನೆ ಮಾಡಿ ಗೂಂಡಾವರ್ತನೆ ತೋರಿದ್ದಾರೆ. ಮರಾಠಿ ಬರುವುದಿಲ್ಲ ಅಂತಾ ಹೇಳುತ್ತಿದ್ದಂತೆ ಬಸ್ ಬೋರ್ಡ್ ಒಡೆದು ಹಾಕಿ ಧಮ್ಕಿ ಹಾಕಿ, ಉದ್ದಟತನ ಮೆರೆದಿದ್ದಾರೆ.
ಸದ್ಯ ಕರ್ನಾಟಕ ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಬೆಳಗಾವಿಯಿಂದ ನಿಪ್ಪಾಣಿ ವರೆಗೆ ಮಾತ್ರ ಬಸ್ ಕಾರ್ಯಾಚರಣೆ ನಡೆಯಲಿದೆ. ಮುಂಬೈ, ಠಾಣೆ, ಪುಣೆ, ಶಿರಡಿ, ನಾಸಿಕ್ , ಕೊಲ್ಲಾಪುರ, ಪುಣೆ, ಮುಂಬೈ ಮಾರ್ಗದ ಎಲ್ಲಾ ಬಸ್ ರದ್ದು ಮಾಡಲಾಗಿದ್ದು, ಮುಂಗಡ ಬುಕ್ಕಿಂಗ್ ಮಾಡಿರೋ ಟಿಕೆಟ್ಗಳನ್ನು ಕೂಡ ಕ್ಯಾನ್ಸಲ್ ಮಾಡಿದ್ದಾರೆ. ಇನ್ನೆರಡು ದಿನಗಳ ಕಾಲ ಬಸ್ ಕಾರ್ಯಾಚರಣೆ ಮಾಡದಂತೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ.