ಬೆಂಗಳೂರು: ಏಷ್ಯನ್ ಗೇಮ್ಸ್ ನಲ್ಲಿ ಟೀಮ್ ಇಂಡಿಯಾದ ಪರ ಆಯ್ಕೆ ಆಗದಿದ್ದಕ್ಕೆ ಶಿಖರ್ ಧವನ್ ಬೇಸರ ಹೊರಹಾಕಿದ್ದಾರೆ.
ಟೀಮ್ ಇಂಡಿಯಾದ ಸ್ಫೋಟಕ ಆಟಗಾರರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ನಿವೃತ್ತಿ ನಂತರ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಗಮನ ಸೆಳೆದಿದ್ದ ಗಬ್ಬರ್ ಖ್ಯಾತಿಯ ಶಿಖರ್ ಧವನ್, ಯುವ ಆಟಗಾರ ಶುಭಮನ್ ಗಿಲ್ ಆಗಮನದ ನಂತರ ಆರಂಭಿಕ ಸ್ಥಾನವನ್ನು ಕಳೆದುಕೊಂಡರು. ಅಲ್ಲದೆ 2022ರ ಡಿಸೆಂಬರ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ನಂತರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಧವನ್ ವಿಫಲರಾಗಿದ್ದಾರೆ.
ಬಿಸಿಸಿಐ ಆಯ್ಕೆಗಾರರ ನಿರ್ಧಾರವನ್ನು ನಾನು ಗೌರವಿಸುತ್ತೇನೆ, ಆದರೆ ನನ್ನ ಮುಂದಿನ ಭವಿಷ್ಯದ ಬಗ್ಗೆ ಚರ್ಚಿಸಲು ಯಾವುದೇ ಸದಸ್ಯರು ಸಂಪರ್ಕ ಮಾಡದಿರುವುದು ನನಗೆ ಬೇಸರ ಮೂಡಿಸಿದೆ ಎಂದು ಶಿಖರ್ ಧವನ್ ಹೇಳಿದ್ದಾರೆ.
“ಟೀಮ್ ಇಂಡಿಯಾದ ಪರ 2018ರಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದೆ. ಆ ನಂತರ ನಾನು ಸಂಪೂರ್ಣವಾಗಿ ವೈಟ್ ಬಾಲ್ (ಏಕದಿನ, ಟ್ವೆಂಟಿ-20) ಕಡೆ ನನ್ನ ಗಮನವನ್ನು ಕೇಂದ್ರೀಕರಿಸಿದೆ. ಕಳೆದ 4-5 ವರ್ಷಗಳಿಂದ ಟೆಸ್ಟ್ ಜೀವನದಿಂದ ನಾನು ದೂರ ಉಳಿದಿದ್ದೇನೆ. ಪ್ರತಿಯೊಬ್ಬ ಕ್ರಿಕೆಟಿಗರ ಜೀವನದಲ್ಲಿ ವಯಸ್ಸು ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದ್ದರಿಂದ ನಾನು ಟೆಸ್ಟ್ ಕ್ರಿಕೆಟ್ ನಿಂದ ದೂರ ಸರಿದೆ. ನನ್ನ ದೇಹಕ್ಕೆ ವಿಶ್ರಾಂತಿ ನೀಡಿ ವೈಟ್ ಬಾಲ್ ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನ ಹರಿಸಿದೆ” ಎಂದು ಶಿಖರ್ ಧವನ್ ಹೇಳಿದ್ದಾರೆ.