ಚಿಕ್ಕಬಳ್ಳಾಪುರ:– ಕಪ್ಪಗಿದ್ದಾಳೆಂದು ಗಂಡನಿಂದ ಆಗುತ್ತಿದ್ದ ಅವಮಾನ ತಾಳಲಾರದೇ ನೇಣು ಬಿಗಿದುಕೊಂಡು ಚಿಂತಾಮಣಿಯ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಮದುವೆಯಾದ 7 ತಿಂಗಳಲ್ಲೇ ಆ ಮಹಿಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆಕೆಯ ಅತ್ತೆ, ಮಾವ, ಮೈದುನ, ಗಂಡ ವರದಕ್ಷಿಣೆಗಾಗಿ ತಮ್ಮ ಮಗಳನ್ನು ಪೀಡಿಸುತ್ತಿದ್ದರು ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
22 ವರ್ಷದ ಬಿಂದುಶ್ರೀ ಎಂಬz ಮಹಿಳೆ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಆಕೆಯ ಗಂಡ ರಾಘವೇಂದ್ರ ಹೆಚ್.ಎಂ., ಮಾವ ಎನ್.ಮುನಿರಾಜ, ಅತ್ತೆ ಲತಾ ಹಾಗೂ ನರಸಿಂಹಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಂದುಶ್ರೀ ಅವರ ಗಂಡ ರಾಘವೇಂದ್ರ ಸರ್ಕಾರಿ ಸೌಮ್ಯದ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ಮಗಳ ಆತ್ಮಹತ್ಯೆಯಿಂದ ಆಘಾತಗೊಂಡ ಮೃತ ಮಹಿಳೆಯ ತಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಂದುಶ್ರೀ ಕಪ್ಪಗಿದ್ದಾರೆ ಎಂದು ಆಕೆಯನ್ನು ಅವಮಾನಿಸಿ ವರದಕ್ಷಿಣಿ ಕಿರುಕುಳ ನೀಡಿರುವ ಆರೋಪ ಆಕೆಯ ಗಂಡನ ಮನೆಯವರ ಮೇಲೆ ಕೇಳಿಬಂದಿದೆ. 20 ಲಕ್ಷ ರೂಪಾಯಿ ಹಣ ಕೊಡುವಂತೆ ಕಿರುಕುಳ ಆರೋಪ ಕೇಳಿಬಂದಿದೆ. ಬಿಂದುಶ್ರೀ ಮದುವೆಯಾಗಿ 7 ತಿಂಗಳಾಗಿತ್ತು. ಮದುವೆ ವೇಳೆ 60 ಗ್ರಾಂ ತೂಕದ ಚಿನ್ನದ ಆಭರಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮೊದಲ 2 ತಿಂಗಳು ಆಕೆಯ ಗಂಡನ ಮನೆಯಲ್ಲಿ ಚೆನ್ನಾಗಿ ನೋಡಿಕೊಂಡಿದ್ದರು. ನಂತರ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆಯಲು ಮಗಳ ನಮ್ಮ ಮನೆಗೆ ಬಂದಾಗ ವಾಪಾಸ್ ತಮ್ಮ ಮನೆಗೆ ಬರುವಾಗ 20 ಲಕ್ಷ ರೂ. ಹಣ ತರುವಂತೆ ಆಕೆಯ ಮಾವ ಹೇಳಿ ಕಳುಹಿಸಿದ್ದರು. ಆಕೆ ಮನೆಗೆ ಹೋದಾಗ ವರದಕ್ಷಿಣೆ ತರಲಿಲ್ಲವೆಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಬಿಂದುಶ್ರೀ ತವರು ಮನೆಯವರು ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ನಗರಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.