ಇತ್ತೀಚೆಗೆ ಯುಟ್ಯೂಬರ್ ಗಳ ಸಂಖ್ಯೆ ಹೆಚ್ಚುತ್ತಿದೆ. ಯುಟ್ಯೂಬ್ ನಲ್ಲಿ ಸದ್ದು ಮಾಡಿದ ಸಾಕಷ್ಟು ಜನ ಬಳಿಕ ಸಿನಿಮಾಗಳಲ್ಲಿ ಚಾನ್ಸ್ ಗಿಟ್ಟಿಸಿಕೊಳ್ತಿದ್ದಾರೆ. ಇದೀಗ ಯುಟ್ಯೂಬ್ ಮೂಲಕ ಖ್ಯಾತಿ ಘಳಿಸಿ ಸಿನಿಮಾದಲ್ಲಿ ಅವಕಾಶ ಪಡೆದಿದ್ದ ಖ್ಯಾತ ಯುಟ್ಯೂಬರ್ ನನ್ನು ಲೈಂಗಿಕ ಕಿರುಕುಳ ಕೇಸ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ತೆಲುಗಿನಲ್ಲಿ ಪೆಲ್ಲಿವಾರಮಂಡಿ ಮತ್ತು ಮಾ ಟಕ್ಲುಕು ಎಂಬ ವೆಬ್ ಸೀರೀಸ್ ನೊಂದಿಗೆ ಜನಪ್ರಿಯತೆ ಗಳಿಸಿದ ಪ್ರಸಾದ್, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಆತನೊಂದಿಗೆ ವೆಬ್ ಸಿರೀಸ್ನಲ್ಲಿ ನಟಿಸಿದ್ದ ಯುವತಿಯೊಬ್ಬಳು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಹಿನ್ನೆಲೆ ಯೂಟ್ಯೂಬರ್ನನ್ನು ಬಂಧಿಸಲಾಗಿದೆ.
ಕೆಲ ತಿಂಗಳಿಂದ ಆತ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಶೂಟಿಂಗ್ ಸಮಯದಲ್ಲಿ ತನ್ನ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪ್ರಸಾದ್ ಬೆಹರಾನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೊಲೀಸರು ಪ್ರಸಾದ್ ಬೆಹರಾ ವಿರುದ್ಧ ಸೆಕ್ಷನ್ 75(2), 79, 351(2) ಬಿಎನ್ ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸಾದ್ ಬೆಹರಾ ಅವರು ಯೂಟ್ಯೂಬರ್ ಆಗಿ ತಮ್ಮ ಕೆರಿಯರ್ ಪ್ರಾರಂಭಿಸಿದರು. ಪೆಲ್ಲಿವಾರಮಂಡಿ ಜೊತೆಗೆ ಮಾವಿದಕುಲು, ಮೆಕ್ಯಾನಿಕ್, ದಿಲ್ ಪಸಂದ್ ಮುಂತಾದ ಹಲವು ವೆಬ್ ಸೀರೀಸ್ ಗಳ ಮೂಲಕ ಯೂಟ್ಯೂಬ್ ಸ್ಟಾರ್ ಆಗಿ ಪ್ರಸಾದ್ ಬೆಹರಾ ಉತ್ತಮ ಕ್ರೇಜ್ ಗಿಟ್ಟಿಸಿಕೊಂಡಿದ್ರು.
ಯೂಟ್ಯೂಬ್ ನಲ್ಲಿ ಹಲವು ಕಿರುಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಪ್ರಸಾದ್ ಚಿರಪರಿಚಿತರಾಗಿದ್ರು. ಪ್ರಸಾದ್ ಬೆಹರಾ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು. ಈಗಾಗಲೇ ಹಲವು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸಾದ್ ವಿಶೇಷವಾಗಿ ಹಾಸ್ಯ ಪ್ರಧಾನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.