ಬೆಂಗಳೂರು: ನನ್ನ ಮೇಲೆ ಮಹಿಳೆಯೊಬ್ಬರು ದೂರು ಕೊಟ್ಟಿದ್ದು, ಆದರೆ ಆ ಆರೋಪ ನಿರಾಧಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ತಮ್ಮ ಮೇಲಿನ ಆರೋಪ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾರೋ ಒಬ್ಬ ಹೆಣ್ಣು ಮಗಳು ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದರು. ತಾಯಿ- ಮಗಳು ಅನೇಕ ಬಾರಿ ಬಂದು ಹೋಗುತ್ತಿದ್ದರು. ಹೀಗೆ ಬಂದವರ ಬಳಿ ಏನಾಗಿದೆ ಎಂದು ಕೇಳಿದೆ. ಈ ವೇಳೆ ಅವರು ಅನ್ಯಾಯವಾಗಿದೆ ಎಂದು ಹೇಳಿದರು. ಹೀಗಾಗಿ ನಾನು ಪೊಲೀಸರಿಗೆ ಕರೆ ಮಾಡಿ ನ್ಯಾಯ ಒದಗಿಸುವಂತೆ ಹೇಳಿದೆ. ಆದರೆ ಆ ಸಂದರ್ಭದಲ್ಲಿ ಮಹಿಳೆ ನನ್ನ ಮೇಲೆಯೇ ಏನೇನೋ ಮಾತಾಡೋಕೆ ಶುರು ಮಾಡಿದಳು.
ಆದರೆ, ಬಳಿಕ ಮಹಿಳೆ ನನ್ನ ವಿರುದ್ಧವೇ ಮಾತನಾಡಲು ಶುರು ಮಾಡಿದಳು. ಈ ವಿಷಯದ ಬಗ್ಗೆಯೂ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೆ. ಆದರೆ, ಗುರುವಾರ ಪೊಲೀಸರು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನೋಡೋಣ ಮುಂದೆನಾಗುತ್ತೆ ಅಂತಾ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂದು ನಾನು ಈಗಲೇ ಹೇಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಏನಿದು ಪ್ರಕರಣ?
ಫೆಬ್ರವರಿ 2ರಂದು ತಮ್ಮ ನಿವಾಸದಲ್ಲಿ ಬಿಎಸ್ ಯಡಿಯೂರಪ್ಪ ಅವರು 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಸಂಜೆ ಸಂತ್ರಸ್ತೆಯ ತಾಯಿ ನೀಡಿದ ದೂರಿನನ್ವಯ ಪೊಲೀಸರು ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್ 354 (ಎ) ಅಡಿ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.