ಅತ್ಯಂತ ಆರೋಗ್ಯಕರವೂ, ನಿತ್ಯ ಸೇವನೆಗೆ ಯೋಗ್ಯವಾದುದೂ, ಧಾತುಪುಷ್ಟಿಕರವೂ ಆಗಿರುವ ಎಳ್ಳು ಮತ್ತು ಎಳ್ಳೆಣ್ಣೆಯ ಬಗ್ಗೆ ಇಂದು ತಿಳಿದುಕೊಳ್ಳೋಣ.
ಎಳ್ಳನ್ನು ಹಲವು ವಿಧಗಳಲ್ಲಿ ಬಳಸಬಹುದು. ಎಳ್ಳುಂಡೆಯ ಮೂಲಕ, ಚಟ್ನಿಯಲ್ಲಿ, ಚಟ್ನಿಪುಡಿಯಲ್ಲಿ, ಫೂ›ಟ್ ಸಲಾಡ್ಗಳ ಮೇಲೆ ಹೀಗೆ ಹಲವು ವಿಧಗಳಲ್ಲಿ ಇದನ್ನು ನಾವು ಸೇವಿಸಬಹುದು. ಇದರಿಂದ ಕೂದಲಿನ ಆರೋಗ್ಯ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಏಕೆಂದರೆ ಇದು ಮೂಳೆಯನ್ನು ಪೋಷಿಸುತ್ತದೆ. ಹಾಗಾಗಿ ನಮ್ಮ ಸಂಧಿಗಳ ಬಲವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಇದಕ್ಕೆ ದಂತ್ಯ ಎಂದು ಕೂಡ ಕರೆದಿದ್ದಾರೆ. ಅಂದರೆ ಆರೋಗ್ಯಯುತ ಹಲ್ಲು ತಯಾರಾಗಲು ಇದು ಸಹಾಯಕ ಎಂದರ್ಥ.
ಹಾಗಾಗಿ ಚಿಕ್ಕ ಮಕ್ಕಳಿಗೆ ಹಲ್ಲು ಬೆಳೆಯುವ ಸಮಯದಲ್ಲಿ ಎಳ್ಳುಂಡೆ ಮಾಡಿ ತಿನ್ನಲು ಕೊಡಬಹುದು. ಅಷ್ಟೇ ಅಲ್ಲದೇ ಇದು ಮಿದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಆಬಾಲವೃದ್ಧರಾಧಿಯಾಗಿ ಎಲ್ಲರೂ ತಮ್ಮ ಮಾನಸಿಕ ಆರೋಗ್ಯವನ್ನು, ನೆನಪಿನ ಶಕ್ತಿಯನ್ನು, ಒಟ್ಟಾರೆ ಮನೋಬಲವನ್ನು ಹೆಚ್ಚಿಸಿಕೊಳ್ಳಲು ನಿತ್ಯವೂ ಎಳ್ಳನ್ನು ಸೇವಿಸಬೇಕು. ಎಳ್ಳನ್ನು ನಿಯಮಿತವಾಗಿ ಸೇವಿಸುವುದರಿಂದ ಜಠರಾಗ್ನಿ ಕೂಡ ವರ್ಧಿಸುತ್ತದೆ. ಹಾಗಾಗಿ ಎಷ್ಟೋ ರೋಗಗಳನ್ನು ಬರದಂತೆ ತಡೆಯುವ ಶಕ್ತಿ ಇದಕ್ಕಿದೆ. ಗಾಯಗಳು ಬೇಗ ಗುಣವಾಗುವಂತೆ ಮಾಡುವ ಶಕ್ತಿ ಎಳ್ಳಿಗಿದೆ. ಏಕೆಂದರೆ ಇದು ಧಾತುಗಳ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ರಕ್ತ ಸಂಚಾರ ಸಲೀಸಾಗಿ ಆಗುವಂತೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಆಧುನಿಕ ವಿಜ್ಞಾನ ಕೂಡ ತನ್ನ ಸಂಶೋಧನೆಗಳ ಮೂಲಕ ಒಪ್ಪಿಕೊಂಡಿದೆ. ಅಷ್ಟೇ ಅಲ್ಲದೇ ದೇಹದ ಬಲವನ್ನು ಹೆಚ್ಚಿಸುವ, ಚರ್ಮದ ಆರೋಗ್ಯವನ್ನು ವರ್ಧಿಸುವ, ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಗುಣ ಕೂಡ ಎಳ್ಳಿಗೆ ಇದೆ ಎಂದು ಆಯುರ್ವೆದ ಹೇಳುತ್ತದೆ. ಎಳ್ಳುಗಳಲ್ಲಿ ಕರಿಎಳ್ಳು ಹೆಚ್ಚು ಶ್ರೇಷ್ಠವಾದದ್ದು. ಬಿಳಿ ಎಳ್ಳನ್ನೂ ಕೂಡ ಬಳಸಬಹುದು.
ಎಳ್ಳು ಜಿಡ್ಡಿನ ಅಂಶವನ್ನು ಮತ್ತು ಉಷ್ಣಗುಣವನ್ನು ಹೊಂದಿರುವ ಕಾರಣದಿಂದ ಅತ್ಯಂತ ಶ್ರೇಷ್ಠವಾದ ತೈಲವನ್ನು ನಮಗೆ ಕೊಡುತ್ತದೆ. ಹಾಗಾಗಿಯೇ ಆಯುರ್ವೆದದಲ್ಲಿ ‘ತೈಲಾನಾಂ ತಿಲತೈಲಂ’ ಎಂದು ಹೇಳಿದ್ದಾರೆ. ಅಂದರೆ ಎಣ್ಣೆಗಳಲ್ಲಿ ಎಳ್ಳೆಣ್ಣೆಯು ಅತ್ಯಂತ ಶ್ರೇಷ್ಠವಾದದ್ದು ಎಂದರ್ಥ. ಎಳ್ಳೆಣ್ಣೆ ಬಳಸಿ ಅಡುಗೆಯನ್ನು ತಯಾರಿಸಿದಾಗ ರುಚಿ ಕಡಿಮೆಯಾದರೂ ಆರೋಗ್ಯವನ್ನು ಮಾತ್ರ ಖಂಡಿತ ಹೆಚ್ಚು ಮಾಡಿಯೇ ಮಾಡುತ್ತದೆ. ಬೊಜ್ಜು, ಕೊಲೆಸ್ಟೆರಾಲ್, ಹೃದಯದ ಸಮಸ್ಯೆಗಳಿಗೆ ಹೆದರಿ ನಾವು ಜಿಡ್ಡಿನ ಅಂಶದ ಪದಾರ್ಥಗಳಿಂದ ದೂರವಿರುತ್ತೇವೆ ಅಥವಾ ಸೇವಿಸಿದರೂ ಹೆದರುತ್ತಲೇ ಸೇವಿಸುತ್ತೇವೆ. ಈ ರೀತಿಯ ಸಮಸ್ಯೆಗಳನ್ನು ಹೊಂದಿರುವವರು ಮತ್ತು ಇಂತಹ ತೊಂದರೆಗಳು ಬರಬಾರದು ಎಂಬ ಕಾಳಜಿ ಇರುವವರು ಉಳಿದ ಎಣ್ಣೆಗಳ ಬದಲಿಗೆ ಎಳ್ಳೆಣ್ಣೆಯನ್ನು ಅಡುಗೆಯಲ್ಲಿ ಬಳಸಬೇಕು.
ಮೊದಮೊದಲು ರುಚಿ ಚೆನ್ನಾಗಿಲ್ಲ ಎಂದೆನಿಸಿದರೂ ನಿಧಾನವಾಗಿ ಅದು ರೂಢಿಯಾಗುತ್ತದೆ ಮತ್ತು ಅದೇ ಹೆಚ್ಚು ರುಚಿ ಎಂದೆನಿಸುತ್ತದೆ. ಬಾಯಿಗೆ ಎಣ್ಣೆ ಹಾಕಿ ಮುಕ್ಕಳಿಸುವುದು ಅಂದರೆ ಆಯಿಲ್ ಪುಲ್ಲಿಂಗ್ ಮಾಡಲು ಕೂಡಾ ಎಳ್ಳೆಣ್ಣೆ ಒಳ್ಳೆಯದು. ಇದರಿಂದ ಹಲ್ಲು ಜುಮ್ ಎನ್ನುವುದು, ವಸಡಿನ ಸಮಸ್ಯೆಗಳು, ಬೇಗ ಹಲ್ಲು ಹಾಳಾಗುವ ತೊಂದರೆಗಳು ಹತೋಟಿಗೆ ಬರುತ್ತವೆ. ಇನ್ನು ಅಭ್ಯಂಗಕ್ಕೆ ಅಂದರೆ ದೇಹಕ್ಕೆ ಮಸಾಜ್ ಮಾಡಿಕೊಳ್ಳಲು ಎಳ್ಳೆಣ್ಣೆ, ಅತ್ಯಂತ ಶ್ರೇಷ್ಠವಾದದ್ದು. ಏಕೆಂದರೆ ಬೇರೆ ಎಣ್ಣೆಗಳಿಗೆ ಹೋಲಿಸಿದರೆ ಇದು ಅತ್ಯಂತ ವಾತನಾಶಕ. ಹಾಗಾಗಿ ಇದನ್ನು ಬಿಸಿ ಮಾಡಿ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಮಂಡಿ ನೋವು, ಸೊಂಟ ನೋವು, ಚರ್ಮ ಒಡೆಯುವುದು, ಚರ್ಮ ಸುಕ್ಕು ಗಟ್ಟುವುದು ಮುಂತಾದ ತೊಂದರೆಗಳನ್ನು ತಡೆಯಬಹುದು