ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ನಟ ಎನ್ ಟಿ ರಾಮಸ್ವಾಮಿ ಅವರು ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗ್ಕಕೆ ಎಂಟ್ರಿಕೊಟ್ಟಿದ್ದಾರೆ. ಲವ್ ರೆಡ್ಡಿ ಸಿನಿಮಾದಲ್ಲಿ ರಾಮಸ್ವಾಮಿ ನಟಿಸಿದ್ದು ಈ ಸಿನಿಮಾ ಅಕ್ಟೋಬರ್ 18ರಂದು ರಿಲೀಸ್ ಆಗಿದೆ. ಈ ಸಿನಿಮಾ ನೋಡಿದ ಮಹಿಳೆಯೊಬ್ಬರು ರಾಮಸ್ವಾಮಿಗೆ ಕಪಾಳಮೋಕ್ಷ ಮಾಡಿದ್ದಾರೆ.
‘ಲವ್ ರೆಡ್ಡಿ‘ ಸಿನಿಮಾವು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಚಿಕ್ಕಬಳ್ಳಾಪುರ ಸುತ್ತಮುತ್ತವೇ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಕನ್ನಡದ ಕಲಾವಿದರು ಕೂಡ ಬಣ್ಣ ಹಚ್ಚಿದ್ದಾರೆ. ಅಂತೆಯೇ ಎನ್ಟಿ ರಾಮಸ್ವಾಮಿ ಅವರು ಕೂಡ ನಟಿಸಿದ್ದು, ಚಿತ್ರದಲ್ಲಿ ರಾಮಸ್ವಾಮಿ ನಾಯಕಿ ತಂದೆ ಪಾತ್ರ ಮಾಡಿದ್ದಾರೆ.
ಅಕ್ಟೋಬರ್ 18ರಂದು ಸಿನಿಮಾ ರಿಲೀಸ್ ಆಗಿದ್ದು ಚಿತ್ರತಂಡ ಥಿಯೇಟರ್ ವಿಸಿಟ್ಗೆ ಹೋಗಿದೆ. ಪ್ರೇಕ್ಷಕರಿಗೆ ಧನ್ಯವಾದ ಹೇಳುವ ಸಲುವಾಗಿ ಸಿನಿಮಾ ಮುಗಿದ ಬಳಿಕ ಒಳಗಡೆ ಇಡೀ ತಂಡ ಹೋಗಿದೆ. ಆಗ ರಾಮಸ್ವಾಮಿ ಅವರು ಕೂಡ ಥಿಯೇಟರ್ ಒಳಗೆ ಹೋಗಿದ್ದಾರೆ. ಈ ವೇಳೆ ದಿಢೀರನೇ ಪ್ರೇಕ್ಷಕರ ಗುಂಪಿನಿಂದ ಓಡಿಬಂದ ಮಹಿಳೆಯೊಬ್ಬರು ಏಕಾಏಕಿ ರಾಮಸ್ವಾಮಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲಿದ್ದವರು ಎಷ್ಟೇ ಪ್ರಯತ್ನ ಪಟ್ಟರು ಆ ಮಹಿಳೆಯನ್ನು ಸಮಾಧಾನ ಮಾಡುಲು ಸಾಧ್ಯವಾಗಲಿಲ್ಲ. ಈ ಘಟನೆಯಿಂದ ಎನ್ ಟಿ ರಾಮಸ್ವಾಮಿ ಅಕ್ಷರಶಃ ಗಲಿಬಿಲಿಗೊಂಡಿದ್ದರು.
ಸಿನಿಮಾದಲ್ಲಿ ರಾಮಸ್ವಾಮಿ ವಿಲನ್ ಪಾತ್ರ ಮಾಡಿದ್ದಾರೆ. ನಾಯಕಿಯ ಪ್ರೀತಿಗೆ ಅಡ್ಡ ಬಂದು, ಆಕೆಯ ತಲೆಗೆ ಕಲ್ಲಿನಿಂದ ಹೊಡೆಯುವ ಪಾತ್ರವನ್ನು ರಾಮಸ್ವಾಮಿ ನಿಭಾಯಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಮಹಿಳೆಯು ರಾಮಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿದ್ದವರು ‘ಅದು ಸಿನಿಮಾ, ನಿಜವಲ್ಲ‘ ಎಂದು ಹೇಳಿದರೂ ಆಕೆ ಸಮಾಧಾನ ಆಗಲಿಲ್ಲ. ಅದೇನೇ ಇದ್ದರೂ, ಸಿನಿಮಾಗಳನ್ನು ಈಗಿನ ಕಾಲದಲ್ಲೂ ಇಷ್ಟೊಂದು ಮುಗ್ಧತೆಯಿಂದ ವೀಕ್ಷಣೆ ಮಾಡುತ್ತಾರಲ್ಲ ಎಂಬ ಮೆಚ್ಚುಗೆ ಮಾತುಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿವೆ. ಕೆಲವರು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಚಾರಕ್ಕೆ ಈ ರೀತಿ ಮಾಡಿರಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ.
ಅಸಲಿಗೆ ಈ ಘಟನೆ ನಿಜವೇ? ಸಿನಿಮಾ ಪ್ರಚಾರಕ್ಕೆ ಹೀಗೆ ಮಾಡಿದರೇ? ಒಂದು ವೇಳೆ ಪ್ರಚಾರದ ಗಿಮಿಕ್ ಆಗಿದ್ದರೆ, ಕನ್ನಡದ ನಟನನ್ನು ಬಲಿಪಶು ಮಾಡಿದ್ದಾರೆಯೇ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.