ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಬಂಧನವಾಗಿದೆ. ಜುಲೈ 4ರವರೆಗೆ ದರ್ಶನ್ ರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಘಟನೆಯ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟಿ, ದರ್ಶನ್ ಜೊತೆ ಕಾಟೇರ ಸಿನಿಮಾದಲ್ಲಿ ನಟಿಸಿದ್ದ ಶ್ರುತಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
‘ಚಿತ್ರರಂಗ ಎಂದರೆ ಒಂದು ಕುಟುಂಬ ಇದ್ದಂತೆ. ಯಾವ ಕಲಾವಿದರನ್ನೂ ನಾವು ಪ್ರತ್ಯೇಕವಾಗಿ ನೋಡಿಲ್ಲ. ನಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ತೊಂದರೆ ಆದರೆ ಆ ಛಾಯೆ ನಮ್ಮ ಚಿತ್ರರಂಗದ ಮೇಲೆ ಇದ್ದೇ ಇರುತ್ತದೆ. ಎಲ್ಲರೂ ಇದೇ ಮಾತಾಡುತ್ತಿದ್ದಾರೆ. ಎಲ್ಲ ನಿರ್ಮಾಪಕರು ಮಂಕಾಗಿದ್ದಾರೆ. ಮಾನಸಿಕವಾಗಿ ಎಲ್ಲರಿಗೂ ಪರಿಣಾಮ ಬೀರಿದೆ’ ಎಂದಿದ್ದಾರೆ.
ರೇಣುಕಾ ಸ್ವಾಮಿಯ ಕೊಲೆ ನಡೆಯಲು ಮುಖ್ಯ ಕಾರಣ ಆಗಿದ್ದೇ ಒಂದು ಅಶ್ಲೀಲ ಸಂದೇಶ. ‘ತಿಳಿದವರು ಕಮೆಂಟ್ ಮಾಡಿದರೆ ಅದನ್ನು ನಾವು ತಿದ್ದಿಕೊಂಡು ಮುಂದಕ್ಕೆ ಹೋಗಬಹುದು. ಆದರೆ ಫೇಕ್ ಅಕೌಂಟ್ಗಳಿಂದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾದ ಕಮೆಂಟ್ಗಳು ಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅದನ್ನು ಸಹಿಸಿಕೊಂಡು ಯಾವ ಹೆಣ್ಣು ಮಗಳೂ ಇರಲ್ಲ’ ಎಂದಿದ್ದಾರೆ ಶ್ರುತಿ.
‘ಈ ಬಗ್ಗೆ ನಾನು ಎಲ್ಲರ ಜೊತೆ ಸಹಜವಾಗಿ ಮಾತನಾಡುವಾಗ ಒಂದು ವಿಷಯ ಕೇಳುತ್ತೇನೆ. ಪ್ರತಿಯೊಂದು ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ ಖಾತೆಗಳನ್ನು ಕ್ರಿಯೇಟ್ ಮಾಡುವಾಗ ಯಾಕೆ ಕೆವೈಸಿ ಮಾಡಬಾರದು? ಅಕೌಂಟ್ ಹೋಲ್ಡರ್ಗಳಿಗೆ ವಾಕ್ ಸ್ವಾತಂತ್ರ್ಯ ಇರುತ್ತದೆ. ಅದು ಅವರ ಹಕ್ಕು. ಅದನ್ನು ನಾವು ಕಿತ್ತುಕೊಳ್ಳೋಕೆ ಆಗಲ್ಲ. ಆದರೆ ಒಬ್ಬರ ಜೀವ ಹೋಗುವಷ್ಟರಮಟ್ಟಿಗೆ ಕೆಟ್ಟ ಕಮೆಂಟ್ಗಳನ್ನು ಮಾಡಿದ್ದಾರೆ ಎಂದರೆ ಹಿಂದೆ ಯಾರು ಇದ್ದಾರೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ’ ಎಂದು ಶ್ರುತಿ ಹೇಳಿದ್ದಾರೆ.
ದರ್ಶನ್ ಕಷ್ಟದಿಂದ ಬಂದು ಚಿತ್ರರಂಗದಲ್ಲಿ ಬೆಳೆದವರು. ಪ್ರತಿ ಸಿನಿಮಾಗೂ ದರ್ಶನ್ ಹಾರ್ಡ್ ವರ್ಕ್ ಮಾಡುತ್ತಾರೆ. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರದು ಎನ್ನುವ ಅರಿವಿದೆ. ಫಿಟ್ನೆಸ್ ಕಡೆ ಹೆಚ್ಚು ಗಮನ ಕೊಡುತ್ತಿದ್ದರು. ಇಂತಹ ಪ್ರಕರಣದಲ್ಲಿ ದರ್ಶನ್ ಸಿಲುಕಿದ ವಿಚಾರ ಕೇಳಿ ಶಾಕ್ ಆಯ್ತು. ಇದಕ್ಕೆಲ್ಲಾ ತಾರ್ಕಿಕ ಅಂತ್ಯ ಸಿಗಬೇಕು ಎಂದು ಶ್ರುತಿ ಹೇಳಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದ ಹಾದಿಯನ್ನು ನೋಡಿದರೆ ದರ್ಶನ್ ದುಡುಕಿದ್ರು ಅನಿಸುತ್ತದೆ. ಸದ್ಯ ವಿಚಾರಣೆ ನಡೆಯುತ್ತದೆ. ಏನಾಗಲಿದೆ ಎಂದು ಕಾದುನೋಡೋಣ. ನೊಂದ ಕುಟುಂಬಕ್ಕೂ ನ್ಯಾಯ ಸಿಗಬೇಕು ಎಂದು ತಿಳಿಸಿದ್ದಾರೆ.