ಪಬ್ಜಿ ಆಟದ ವೇಳೆ ಸಿಕ್ಕ ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಳ ಮೊದಲ ಪತಿ ಗುಲಾಮ್ ಹೈದರ್ ತನ್ನ ಮಕ್ಕಳನ್ನು ಭಾರತದಿಂದ ಪಾಕ್ ಗೆ ವಾಪಸ್ ಕರೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ.
ತನ್ನ ಅಪ್ರಾಪ್ತ ಮಕ್ಕಳನ್ನು ಭಾರತದಿಂದ ವಾಪಸ್ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಲು ಕಾನೂನು ಹೋರಾಟಕ್ಕೆ ಗುಲಾಮ್ ಹೈದರ್ ಮುಂದಾಗಿದ್ದಾರೆ. ಅದಕ್ಕಾಗಿ ಭಾರತೀಯ ವಕೀಲನನ್ನು ನೇಮಿಸಿಕೊಂಡಿದ್ದಾರೆ ಎಂದು ಪಾಕ್ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸಾರ್ ಬರ್ನಿ ಹೇಳಿದ್ದಾರೆ.
ಅಲಿ ಮೊಮಿನ್ ಎಂಬ ಭಾರತೀಯ ವಕೀಲರನ್ನು ನೇಮಿಸಿಕೊಂಡಿದ್ದು, ಭಾರತದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಪವರ್ ಆಫ್ ಅಟಾರ್ನಿ ಕಳುಹಿಸಲಾಗಿದೆ ಎಂದು ಬರ್ನಿ ತಿಳಿಸಿದ್ದಾರೆ.
ಗುಲಾಮ್ ಹೈದರ್ ಮಕ್ಕಳು ಇನ್ನೂ ಅಪ್ರಾಪ್ತ ವಯಸ್ಸಿನವರು ಆಗಿರುವುದರಿಂದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಧಾರ್ಮಿಕ ಮತಾಂತರ ನಿಷೇಧ ಇರೋದ್ರಿಂದ ಮಕ್ಕಳನ್ನು ಕರೆತರಲು ಮುಂದಾಗಿದ್ದಾರೆ. ಅಲ್ಲದೇ ಸೀಮಾ ನೋಯ್ಡಾದಲ್ಲಿ ನೆಲೆಸಿದ್ದರೂ ಅವರಿನ್ನೂ ಪಾಕಿಸ್ತಾನಿ ಪ್ರಜೆಯೇ ಆಗಿರುವುದರಿಂದ ಮೊದಲ ಪತಿ ಗುಲಾಮ್ ಹೈದರ್ ಮಕ್ಕಳ ಮೇಲೆ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ ಎಂದು ವಕೀಲರು ಹೇಳಿದ್ದಾರೆ.