ಹಿಂದೂ ಸಮುದಾಯಕ್ಕೆ ನವರಾತ್ರಿ ಎಂಬುದು ಒಂದು ಮುಖ್ಯ ಹಬ್ಬ. ದೇಶದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ನವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ನವರಾತ್ರಿಯನ್ನು ಒಂಭತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಹತ್ತನೇ ದಿನವನ್ನು ವಿಜಯ ದಶಮಿ ಎಂದು ಕರೆಯಲಾಗುತ್ತದೆ. ಈ ಒಂಭತ್ತು ದಿನಗಳ ಕಾಲದಲ್ಲಿ ಭಕ್ತ ಜನರು ದೇವಿಯ 9 ಅವತಾರಗಳನ್ನು ಪೂಜಿಸುತ್ತಾರೆ. ಶುಕ್ಲ ಪಕ್ಷದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ.
ಈ ಬಾರಿಯ ನವರಾತ್ರಿಯು ಅಕ್ಟೋಬರ್ 3 ರಿಂದ (ಇಂದಿನಿಂದ) ಪ್ರಾರಂಭವಾಗಲಿದೆ. ಒಂಬತ್ತು ದಿನಗಳಲ್ಲಿ ಒಂಭತ್ತು ದೇವತೆಗಳನ್ನು ಪೂಜೆ ಮಾಡಲಾಗುತ್ತದೆ. ಈ ಒಂಭತ್ತು ದಿನಗಳಿಗೆ, ದೇವತಾ ಆರಾಧನೆ ಅನುಸಾರ ಒಂಭತ್ತು ಬಣ್ಣಗಳನ್ನು ಕೂಡ ಗುರುತಿಸಲಾಗಿದೆ. ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಒಂಭತ್ತು ದಿನಗಳ ಬಣ್ಣಗಳನ್ನು ಹಾಗೂ ಅದರ ವಿಶೇಷತೆಗಳನ್ನು ನಾವು ಇಲ್ಲಿ ನೀಡಿದ್ದೇವೆ.
ನವರಾತ್ರಿ 1: ಅಕ್ಟೋಬರ್ 3, ಹಳದಿ ಬಣ್ಣ
ನವರಾತ್ರಿ ಹಬ್ಬದ ಮೊದಲನೇ ದಿನದಂದು ತಾಯಿ ಶೈಲಪುತ್ರಿ ದೇವಿಯನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸಲಾಗುತ್ತದೆ. ಇದು ದುರ್ಗಾ ದೇವಿಯ ಮೊದಲನೇ ಅವತಾರವಾಗಿದೆ. ಈ ದಿನ ನವರಾತ್ರಿ ಕಲಶವನ್ನು ಇಡುವುದರೊಂದಿಗೆ ನವರಾತ್ರಿ ಆಚರಣೆಯು ಪ್ರಾರಂಭವಾಗುತ್ತದೆ. ಇದನ್ನು ದುರ್ಗಾ ದೇವಿಯ ವಿಗ್ರಹವನ್ನು ಆಹ್ವಾನಿಸಲು ನಡೆಸಲಾಗುತ್ತದೆ. ಈ ದಿನ ಭಕ್ತರು ಪೂಜಿಸಲಾಗುವ ಶೈಲಪುತ್ರಿ ದೇವಿಯು ಹಳದಿ ಬಣ್ಣವನ್ನು ಇಷ್ಟಪಡುತ್ತಾಳೆ. ಹಾಗಾಗಿ, ಈ ದಿನದಂದು ಹಳದಿ ಬಣ್ಣದ ಬಟ್ಟೆಯನ್ನು ಧರಿಸಲಾಗುತ್ತದೆ.
ನವರಾತ್ರಿ 2: ಅಕ್ಟೋಬರ್ 4, ಬಿಳಿ ಬಣ್ಣ
ನವರಾತ್ರಿಯ ಎರಡನೇ ದಿನವು ಪಾರ್ವತಿ ದೇವಿಯ ಅವಿವಾಹಿತ ರೂಪವನ್ನು ಪ್ರತಿನಿಧಿಸುವ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆ ಶಿವನನ್ನು ತನ್ನ ಪತಿಯನ್ನಾಗಿ ಪಡೆದುಕೊಳ್ಳುವುದಕ್ಕಾಗಿ ಬ್ರಹ್ಮಚರ್ಯದ ಮೂಲಕ ಕಠಿಣ ತಪಸ್ಸನ್ನು ಮಾಡಿದವಳು. ಬ್ರಹ್ಮಚಾರಿಣಿ ದೇವಿಯು ಬಿಳಿ ಬಣ್ಣದ ಬಟ್ಟೆಯನ್ನು ಧರಿಸುತ್ತಾಳೆ. ಹಾಗಾಗಿ, ನವರಾತ್ರಿಯ ಎರಡನೇ ದಿನ ನೀವು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಬೇಕು.
ನವರಾತ್ರಿ 3: ಅಕ್ಟೋಬರ್ 5, ಬೂದು ಬಣ್ಣ
ನವರಾತ್ರಿ ಹಬ್ಬದ ಮೂರನೇ ದಿನದಂದು ಪಾರ್ವತಿ ದೇವಿಯ ಚಂದ್ರಘಂಟಾ ರೂಪವನ್ನು ಪೂಜಿಸಲಾಗುತ್ತದೆ ಮತ್ತು ಅವಳು ಪಾರ್ವತಿ ದೇವಿಯ ವಿವಾಹಿತ ರೂಪವನ್ನು ಪ್ರತಿನಿಧಿಸುತ್ತಾಳೆ ಮತ್ತು ಅವಳ ಹಣೆಯ ಅರ್ಧ ಚಂದ್ರನ ಆಕಾರದಲ್ಲಿ ತಿಲಕವಿರುವುದರಿಂದ ಆಕೆಯನ್ನು ಚಂದ್ರಘಂಟಾ ದೇವಿ ಎಂದು ಕರೆಯಲಾಗುತ್ತದೆ. ನವರಾತ್ರಿ ಹಬ್ಬದ ಮೂರನೇ ದಿನದಂದು ಬೂದು ಬಣ್ಣದ ಬಟ್ಟೆಯನ್ನು ಧರಿಸುವುದು ಶುಭ.
ನವರಾತ್ರಿ 4: ಅಕ್ಟೋಬರ್ 6, ಕಂದು ಬಣ್ಣ
ನವರಾತ್ರಿ ಹಬ್ಬದ ನಾಲ್ಕನೇ ದಿನವು ದುರ್ಗಾ ದೇವಿಯ ನಾಲ್ಕನೇ ಅವತಾರವಾದ ಕೂಷ್ಮಾಂಡ ದೇವಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನದಂದು ಕೂಷ್ಮಾಂಡ ದೇವಿಯ ಆರಾಧನೆಯನ್ನು ಮಾಡಲಾಗುತ್ತದೆ. ಕೂಷ್ಮಾಂಡ ದೇವಿಯನ್ನು ಬ್ರಹ್ಮಾಂಡದ ಸೃಷ್ಟಿಕರ್ತ ದೇವಿಯೆಂದು ಕೂಡ ಕರೆಯಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನದಂದು ನೀವು ಕಂದು ಬಣ್ಣದ ಬಟ್ಟೆಯನ್ನು ಧರಿಸಬೇಕು.
ನವರಾತ್ರಿ 5: ಅಕ್ಟೋಬರ್ 7, ಕೆಂಪು ಬಣ್ಣ
ನವರಾತ್ರಿ ಹಬ್ಬದ ಐದನೆ ದಿನದಂದು ದೇವಿಯ ಐದನೇ ಅವತಾರವಾದ ತಾಯಿ ಸ್ಕಂದಮಾತಾಳನ್ನು ಪೂಜಿಸಲಾಗುತ್ತದೆ. ಸ್ಕಂದಮಾತಾ ಎನ್ನುವ ಪದವು ಎರಡು ಸಂಸ್ಕೃತ ಪದಗಳಿಂದ ರೂಪುಗೊಂಡಿದೆ. ಇದರಲ್ಲಿ ಸ್ಕಂದ ಎಂದರೆ ಯುದ್ಧದ ದೇವರು ಮತ್ತು ಮಾತಾ ಎಂದರೆ ತಾಯಿ. ಸ್ಕಂದ ಮಾತಾ ಎಂದರೆ ಸುಬ್ರಹ್ಮಣ್ಯ ಸ್ವಾಮಿಯ ತಾಯಿ ಎಂದರ್ಥ. ನವರಾತ್ರಿ ಹಬ್ಬದ 5ನೇ ದಿನದಂದು ಕೆಂಪು ಬಣ್ಣದ ಬಟ್ಟೆಯನ್ನು ನಾವು ಧರಿಸಬೇಕು.
ನವರಾತ್ರಿ 6: ಅಕ್ಟೋಬರ್ 8, ಕಿತ್ತಳೆ ಬಣ್ಣ
ನವರಾತ್ರಿ ಹಬ್ಬದ 6ನೇ ದಿನದಂದು ಪಾರ್ವತಿ ದೇವಿಯ 6ನೇ ಅವತಾರವಾದ ಕಾತ್ಯಾಯಿನಿ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಕಾತ್ಯಾಯಿನಿ ದೇವಿಯು ದುರ್ಗಾ ದೇವಿಯ ಉಗ್ರರೂಪದೊಂದಿಗೆ ಸಂಬಂಧವನ್ನು ಹೊಂದಿದ್ದಾಳೆ. ನವರಾತ್ರಿ ಹಬ್ಬದ ಆರನೇ ದಿನದಂದು ನೀವು ಕಿತ್ತಳೆ ಬಣ್ಣದ ಬಟ್ಟೆಯನ್ನು ಧರಿಸಬೇಕು.
ನವರಾತ್ರಿ 7: ಅಕ್ಟೋಬರ್ 9, ನೀಲಿ ಬಣ್ಣ
ನವರಾತ್ರಿ ಹಬ್ಬದ 7ನೇ ದಿನವು ದುರ್ಗಾ ದೇವಿಯ ಏಳನೇ ರೂಪವಾದ ತಾಯಿ ಕಾಳರಾತ್ರಿಯನ್ನು ಆರಾಧನೆ ಮಾಡಲಾಗುತ್ತದೆ. ಕಾಳರಾತ್ರಿ ದೇವಿಯನ್ನು ದುರ್ಗಾ ದೇವಿಯ ವಿನಾಶಕಾರಿ ರೂಪವೆಂದು ಪರಿಗಣಿಸಲಾಗಿದೆ. ಆಕೆಯನ್ನು ಕಾಳಿ, ಭದ್ರಕಾಳಿ, ಚಂಡಿ ಮತ್ತು ಚಾಮುಂಡಿ ಎಂದೂ ಕರೆಯುತ್ತಾರೆ. ಈ ನವರಾತ್ರಿಯ ಏಳನೇ ದಿನದಂದು ಕಡು ನೀಲಿ ಬಣ್ಣದ ಬಟ್ಟೆಯನ್ನು ಧರಿಸಬೇಕು.
ನವರಾತ್ರಿ 8ನೇ ದಿನ: ಅಕ್ಟೋಬರ್ 10, ಗುಲಾಬಿ ಬಣ್ಣ
ಮಹಾಗೌರಿಯು ದುರ್ಗಾ ದೇವಿಯ ಎಂಟನೇ ರೂಪವೆಂದು ಪರಿಗಣಿಸಲಾಗುತ್ತದೆ. ನವರಾತ್ರಿಯ 8ನೇ ದಿನವನ್ನು ಮಹಾಷ್ಟಮಿ ಎಂದು ಕರೆಯಲಾಗುತ್ತದೆ. ಮಹಾಷ್ಟಮಿ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸುವ ಪದ್ಧತಿಯಿದೆ. ಮಹಾಗೌರಿ ಎಂದರೆ ಅವಳ ಬಣ್ಣ ಮತ್ತು ಸೌಂದರ್ಯವನ್ನು ಸೂಚಿಸುವವಳಾಗಿದ್ದಾಳೆ. ಮಹಾಗೌರಿಯು ಬಿಳಿ ಬಣ್ಣವನ್ನು ಹೆಚ್ಚು ಪ್ರೀತಿಸುತ್ತಾಳೆ. ಹಾಗಾಗಿ, ನವರಾತ್ರಿಯ 8ನೇ ದಿನದಂದು ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸುವುದು ಉತ್ತಮ.
ನವರಾತ್ರಿ ದಿನ 9ನೇ ದಿನ: ಅಕ್ಟೋಬರ್ 11 ಹಸಿರು ಬಣ್ಣ
ನವರಾತ್ರಿಯ ಒಂಭತ್ತನೇ ದಿನವನ್ನು ಮಹಾನವಮಿ ಎಂದು ಕರೆಯಲಾಗುತ್ತದೆ. ಈ ದಿನದಂದು ದುರ್ಗಾ ದೇವಿಯ 9ನೇ ರೂಪವಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಸಿದ್ಧಿದಾತ್ರಿ ದೇವಿ ಎಂದರೆ ಅಲೌಕಿಕ ಶಕ್ತಿ ಮತ್ತು ಧ್ಯಾನ ಶಕ್ತಿಗಳನ್ನು ನೀಡುವವಳು ಎಂಬುದಾಗಿದೆ. ನವರಾತ್ರಿ ಹಬ್ಬದ 9ನೇ ದಿನದಂದು ಅಂದರೆ, ಮಹಾನವಮಿಯಂದು ನೀವು ಹಸಿರು ಬಣ್ಣದ ಬಟ್ಟೆಯನ್ನು ಧರಿಸಬೇಕು.