ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ಎಂಎಸ್.ವಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಅದ್ಧೂರಿ ವಾರ್ಷಿಕೋತ್ಸವ ನೆರವೇರಿತು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಳಿಕ ಮಾತನಾಡಿದ ಅವರು, ಜಾಗತೀಕರಣ, ವಿಜ್ಞಾನ- ತಂತ್ರಜ್ಞಾನ ಬೆಳೆದಂತೆ ‘ಅಂಗೈಯಲ್ಲೇ ಪ್ರಪಂಚ ‘ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಬೈಲ್ ಎಂಬುದು ಆಧುನಿಕ ಯುಗದ ಬಹುದೊಡ್ಡ ಆವಿಷ್ಕಾರವೆನಿಸಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ಸಾಕಷ್ಟು ಜ್ಞಾನ ಸಂಪಾದನೆ ಮಾಡಬಹುದು. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಾವು ಖಚಿತ. ನಮ್ಮ ಸ್ವಾರ್ಥ ಬದಿಗಿಟ್ಟು ಸಮಾಜಕ್ಕಾಗಿ ದುಡಿಯುವಂತಹ ವ್ಯಕ್ತಿಗಳಾಗಬೇಕು. ಸ್ವಾಮಿ ವಿವೇಕಾನಂದ, ಗೌತಮ ಬುದ್ಧ, ಮಹಾತ್ಮ ಗಾಂಧಿ, ಭಗತ್ ಸಿಂಗ್ ಅವರು ಈಗಲೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆಂದರೆ ಅದು ಅವರು ಸಮಾಜಕ್ಕೆ ಕೊಟ್ಟ ಕೊಡುಗೆಯಿಂದ ಮಾತ್ರ ಸಾಧ್ಯವಾಗಿದೆ. ಅಂತಹ ಸಮಾಜೋದ್ಧಾರಕ್ಕಾಗಿ ಶ್ರಮಿಸಿ ಜನರ ಮನಸ್ಸಲ್ಲಿ ಆಚಂದ್ರಾರ್ಕ ಸ್ಥಾಯಿಯಾಗಿ ಉಳಿಯುವಂತಹ ಸಾಧಕರು ನೀವಾಗಬೇಕು ಎಂದು ಹಿತವಚನ ನೀಡಿದರು.
ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಎಂಎಸ್ ವಿ ಪಬ್ಲಿಕ್ ಶಾಲೆ ಸತತ 16 ವರ್ಷಗಳಿಂದಲೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಶತ ಫಲಿತಾಂಶ ದಾಖಲಿಸುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ದೇಶದ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ದೇಶ ಸೇವೆ ಮಾಡುತ್ತಿರುವುದು ನೋಡಿದರೆ ಶಾಲೆಯಲ್ಲಿ ಸಿಗುವ ಶಿಕ್ಷಣ ಎಂತಹದ್ದು ಎಂಬುದು ಅರ್ಥವಾಗುತ್ತದೆ. ಉತ್ತಮವಾದ ಶಿಕ್ಷಣ ಸಂಸ್ಕಾರ , ಶಿಸ್ತು ಕಲಿಸುವಲ್ಲಿ ಎಂಎಸ್ ವಿ ಶಾಲೆಯ ಬದ್ಧತೆ ಆದರ್ಶಪ್ರಾಯವಾದದು ಎಂದು ಅಭಿಪ್ರಾಯಪಟ್ಟರು.
ಖ್ಯಾತ ಇತಿಹಾಸ ತಜ್ಞ, ಮೈಸೂರಿನ ಕಥೆಗಳು ಲೇಖಕರಾದ ಧರ್ಮೇಂದ್ರ ಕುಮಾರ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಗುರಿ ಇರಬೇಕು. ಗುರಿಯಿಲ್ಲದ ಜೀವನ , ಸೂತ್ರವಿಲ್ಲದ ಗಾಳಿ ಪಟ ಎರಡು ಒಂದೇ. ಹೀಗಾಗಿ ವಿದ್ಯಾರ್ಥಿಗಳು ನಿಮ್ಮ ಸುಂದರವಾದ ಭವಿಷ್ಯದ ಕುರಿತು ಗುರಿ ಇಟ್ಟುಕೊಳ್ಳಬೇಕು ಎಂದು ಸರ್ .ಎಂ ವಿಶ್ವೇಶ್ವರಯ್ಯ ನವರ ಜೀವನದ ಒಂದು ಸಣ್ಣ ಘಟನೆಯನ್ನು ಉದಾಹರಣೆಯಾಗಿ ನೀಡಿದರು.
ಶಾಲೆಯ ಸಂಸ್ಥಾಪಕ ಸುಬ್ರಮಣ್ಯ ಎ.ಅವರು ಮಾತನಾಡಿ, ಈ ಪವಿತ್ರ ವಿದ್ಯಾಸಂಸ್ಥೆ ಆರಂಭಗೊಂಡು ಇಂದಿಗೆ 16 ವರ್ಷಗಳಾಗುತ್ತಿವೆ. ಮಕ್ಕಳಲ್ಲಿ ಸೃಜನಶೀಲತೆ ಗುರುತಿಸಿ ಅವರಿಗೆ ಉತ್ತಮವಾದ ವೇದಿಕೆ ಕಲ್ಪಿಸಿಕೊಟ್ಟಿದೆ. ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಶಿಸ್ತು, ಸಂಸ್ಕಾರ ಕಲಿಸಿ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡುವಲ್ಲಿ ಎಂಎಸ್ ವಿ ಶಾಲೆ ಸದಾ ಒಂದು ಹೆಜ್ಜೆ ಮುಂದಿದೆ. ಸತ್ಪ್ರಜೆಗಳ ನಿರ್ಮಾಣವೇ ನಮ್ಮ ಸಂಕಲ್ಪ. ಈ ನಿಟ್ಟಿನಲ್ಲಿ ನಾವು ಸದಾ ಅಚಲವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.
ಕಾರ್ಯ ಕ್ರಮದ ಅಂಗವಾಗಿ ನಮ್ಮ ದೇಶದ ಸಂಸ್ಕೃತಿ, ಆಚಾರ ,ವಿಚಾರ, ಜನಪದ, ಸಾಹಿತ್ಯ ಬಿಂಬಿಸುವ ಆಕರ್ಷಕ ನೃತ್ಯ ಕಾರ್ಯಕ್ರಮ ಪೋಷಕರನ್ನು ಮನಸೂರೆಗೊಳಿಸಿತು.
ಪೋಷಕರು ವೇದಿಕೆಯ ಮೇಲೆ ತಮ್ಮ ಮಕ್ಕಳ ಪ್ರತಿಭೆ ವೀಕ್ಷಿಸಿ ಸಂತಸಪಟ್ಟರು.
ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗಣ್ಯರು ಗೌರವಿಸಿದರು. ಶಾಲೆಯ ಕಾರ್ಯದರ್ಶಿ ಮಂಜುಳಾ ಸುಬ್ರಹ್ಮಣ್ಯ, ಉಪಾಧ್ಯಕ್ಷ ಸ್ವರೂಪ್ ,ಟ್ರಸ್ಟಿಗಳಾದ ನಯನಾ ಸ್ವರೂಪ್ ,ಶಾಲಾ ಪ್ರಾಂಶುಪಾಲರಾದ ರೆಮ್ಯ ಬಿ.ವಿ ,ವಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು