ಬರದ ನಾಡು ವಿಜಯಪುರ ಜಿಲ್ಲೆಯ ರೈತ ದ್ರಾಕ್ಷಿ ಬೆಳೆಗೆ ಗುಡ್ ಬೈ ಹೇಳಿ, ಕಾಶ್ಮೀರಿ ಸೇಬು ಬೆಳೆದು ಉಳಿದೆಲ್ಲ ರೈತರಿಗೆ ಮಾದರಿಯಾಗಿದ್ದಾರೆ.
ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ಗ್ರಾಮದ ರೈತ ಅಮಗೊಂಡ ಗೊಳಸಂಗಿ ಹಾಗೂ ಸೋಮನಿಂಗ ಗೊಳಸಂಗಿ ಅವರು ಕಾಶ್ಮೀರದಲ್ಲಿ ಬೆಳೆಯುವ ಸೇಬು ಹಣ್ಣನ್ನು ಬೆಳೆದು ಗಮನ ಸೆಳೆದಿದ್ದಾರೆ.
ತಮ್ಮ 15 ಎಕರೆ ಜಮೀನಿನಲ್ಲಿ ಆರು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆದಿದ್ದರು. ಅದರಿಂದ ನಿರೀಕ್ಷಿತ ಆದಾಯ ಸಿಕ್ಕಿರಲಿಲ್ಲ. ಹೀಗಾಗಿ, ಕಡಿಮೆ ಖರ್ಚು ಮಾಡಿ ಹೆಚ್ಚು ಆದಾಯ ಬರುವಂತ ಸೇಬು ಬೆಳೆಯುವ ಕೃಷಿಯತ್ತ ಮುಖ ಮಾಡಿ ಯಶಸ್ವಿ ಆಗಿದ್ದಾರೆ.
ಎರಡು ವರ್ಷದ ಸೇಬು ಬೇಳೆ ಐದರಿಂದ ಆರು ಅಡಿ ಎತ್ತರ ಬೆಳೆದಿದೆ. ಪ್ರತಿ ಗಿಡದಲ್ಲಿ ಎಂಟರಿಂದ ಹತ್ತು ಕಿಲೋ ಸೇಬು ಹಣ್ಣಿನ ಗೊಂಚಲುಗಳಿವೆ. ಇನ್ನು ಒಂದು ತಿಂಗಳಲ್ಲಿ ಸೇಬು ಮಾರುಕಟ್ಟೆ ಸೇರಲಿವೆ. ಇದರಿಂದ ಲಕ್ಷಾಂತರ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದು ರೈತ ಅಮಗೊಂಡ ಹೇಳಿದ್ದಾರೆ.
ದ್ರಾಕ್ಷಿ ಬಿಟ್ಟು ಸೇಬು ಕೃಷಿಯತ್ತ ಒಲವು ತೋರಿಸಿರುವ ರೈತರ ನಿರ್ಧಾರಕ್ಕೆ ಸಚಿವ ಎಂ.ಬಿ. ಪಾಟೀಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ಗ್ರಾಮದ ರೈತರಾದ ಅಮಗೊಂಡ ಗೊಳಸಂಗಿ ಹಾಗೂ ಸೋಮನಿಂಗ ಗೊಳಸಂಗಿ ಅವರು ತಮ್ಮ 15 ಎಕರೆಯಲ್ಲಿ ಸೇಬು ಬೆಳೆದು ಲಕ್ಷಾಂತರ ರೂ.ಗಳ ಆದಾಯದ ನಿರೀಕ್ಷೆಯಲಿದ್ದಾರೆ. ಈ ಯಶಸ್ವಿ ರೈತರ ಯಶೋಗಾಥೆ ಉಳಿದೆಲ್ಲ ರೈತರಿಗೆ ಮಾದರಿಯಾಗಿದೆ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ತಿಳಿಸಿದ್ದಾರೆ.