ಬೆಂಗಳೂರು: ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರತು ಸಾವರ್ಕರ್ ಅವರ ವಾದ ಅಲ್ಲ ಹಾಗೆ ‘ವಿನಾಯಕ ದಾಮೋದರ್ ಸಾವರ್ಕರ್ ಒಬ್ಬ ಚಿತ್ಪಾವನ ಬ್ರಾಹ್ಮಣ. ಅವರು ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಅವರು ಗೋಹತ್ಯೆಗೆ ವಿರುದ್ಧವಾಗಿರಲಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಅವರು ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾವರ್ಕರ್ ಮೂಲಭೂತವಾದಿಯಾಗಿದ್ದರು ಎನ್ನುವುದರಲ್ಲಿ ಸಂಶಯವಿಲ್ಲ. ಮೂಲಭೂತವಾದ ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲ. ಇದು ಯುರೋಪ್ನಿಂದ ಬಂದಿರುವಂತದ್ದು. ಸಾವರ್ಕರ್ ಯೂರೋಪ್ನಿಂದ ಸಾಕಷ್ಟು ಪ್ರಭಾವ ಹೊಂದಿದ್ದರು. ಜೊತೆಗೆ ಬ್ರಾಹ್ಮಣ ಸಮಾಜದ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು. ಮಾಂಸಹಾರ ಸೇವನೆಯನ್ನು ಅವರು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಆದರೆ ಗಾಂಧೀಜಿಯವರು ಸಸ್ಯಾಹಾರಿ. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಗಾಂಧೀಜಿಯವರಿಗೆ ಅಪಾರವಾದ ನಂಬಿಕೆ ಇತ್ತು ಎಂದರು.
ಮೊಹಮ್ಮದ್ ಅಲಿ ಜಿನ್ನಾ ಕೂಡ ಡೆಮಾಕ್ರಟಿಕ್ ಆಗಿದ್ದರು. ಅವರು ಕೂಡ ಕಟ್ಟಾ ಇಸ್ಲಾಂವಾದಿಯಾಗಿರಲಿಲ್ಲ. ಅವರು ವೈನ್ ಕುಡಿಯುತ್ತಿದ್ದರು, ಹಂದಿ ಮಾಂಸ ಸೇವನೆ ಮಾಡಿದ್ದರು ಎಂದು ಅನೇಕರು ಹೇಳುತ್ತಾರೆ. ಜಿನ್ನಾ ಮೂಲಭುತವಾದಿಯಾಗಿರಲಿಲ್ಲ. ಆದರೆ, ಸಾವರ್ಕರ್ ಮೂಲಭೂತವಾದಿಯಾಗಿದ್ದರು ಎಂದೂ ಗುಂಡೂರಾವ್ ಹೇಳಿದ್ದಾರೆ.
ದೇಶದಲ್ಲಿ ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರತು ಸಾವರ್ಕರ್ ವಾದ ಅಲ್ಲ. ಯಾಕೆಂದರೆ ಸಾವರ್ಕರ್ ರಾಷ್ಟ್ರೀಯವಾದಿ ಆಗಿದ್ದರೂ, ಅವರ ಮೂಲಭೂತವಾದ ದೇಶಕ್ಕೆ ವಿರುದ್ಧವಾಗಿದೆ. ಮತ್ತು ಗಾಂಧೀಜಿಯವರ ಹತ್ಯೆ ಮಾಡಿದ ಗೋಡ್ಸೆ, ಸಾವರ್ಕರ್ ವಾದದಿಂದ ಪ್ರಭಾವಿತರಾಗಿದ್ದರು. ಸಾವರ್ಕರ್ ಅವರಲ್ಲಿದ್ದ ಚಿಂತನೆಗಳು, ರಾಷ್ಟ್ರೀಯವಾದಿ ಚಿಂತನೆಗಳ ರೀತಿ ಕಂಡರೂ ಪ್ರಜಾಪ್ರಭುತ್ವದ ಪರವಾದ ವ್ಯಕ್ತಿತ್ವ ಅವರದ್ದಲ್ಲ ಎಂದು ಹೇಳಿದರು.