ಬೆಂಗಳೂರು:- ಸಚಿವ ಸತೀಶ್ ಜಾರಕಿಹೊಳಿ ವಿದೇಶಕ್ಕೆ ಹಾರಿದ್ದು, ಕರ್ನಾಟಕ ಕಾಂಗ್ರೆಸ್ನಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಕರ್ನಾಟಕ ಉಪಮುಖ್ಯಮಂತ್ರಿ & ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಮತ್ತು ಜಾರಕಿಹೊಳಿ ಬ್ರದರ್ಸ್ ಮಧ್ಯೆ ಮುನಿಸು ಇದೆ ಎಂಬುದು ಹಳೇ ಆರೋಪ. ಆದರೆ ಈ ಮುನಿಸು ಇದೀಗ ಜ್ವಾಲೆಯ ರೂಪ ಪಡೆದಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಅದರಲ್ಲೂ ಕೆಲ ದಿನಗಳ ಹಿಂದಷ್ಟೆ, ಇಂತಹದ್ದೇ ಬೆಳವಣಿಗೆ ನಡೆದು ಅದೇ ಸಮಯದಲ್ಲಿ ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಮೀಟ್ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಈಗ ಮತ್ತೊಮ್ಮೆ ಸತೀಶ್ ಜಾರಕಿಹೊಳಿ ವಿಮಾನ ಏರಿ ತಮ್ಮ ಬೆಂಬಲಿಗರ ಜೊತೆ ವಿದೇಶಕ್ಕೆ ಹಾರಿದ್ದಾರೆ.
ಲೋಕೋಪಯೊಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಆಪ್ತರ ಜೊತೆಯಲ್ಲಿ ವಿದೇಶಕ್ಕೆ ತೆರಳಿದ್ದಾರೆ. ಅವರ ಈ ನಡೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೂ ಕಾರಣವಾಗಿದೆ. ಅಲ್ದೆ ಕಾಂಗ್ರೆಸ್ ಒಳಗೆ ಅಸಮಾಧಾನದ ಹೊಗೆ ಆವರಿಸಿದೆ ಎನ್ನುವ ಆರೋಪ ಮತ್ತೊಮ್ಮೆ ಕೇಳಿಬಂದಿದೆ. ಸತೀಶ್ ಜಾರಕಿಹೊಳಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ತಡರಾತ್ರಿ ವಿದೇಶಕ್ಕೆ ಹೋಗಿದ್ದಾರೆ ಅಂತಾ ಹೇಳಲಾಗಿದೆ. ಅವರು ತಮ್ಮ ಮಗ & ಕೆಲ ಆಪ್ತರ ಜತೆ ಪ್ರಯಾಣ ಬೆಳೆಸಿದ್ದಾರೆ ಎಂದು ಜಾರಕಿಹೊಳಿ ಆಪ್ತ ಮೂಲಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಮತ್ತೊಂದು ಕಡೆ, ಈ ಹಿಂದೆ ತಮ್ಮ ಆಪ್ತ ಶಾಸಕರ ಜೊತೆ ಸಚಿವರು ದುಬೈಗೆ ಹೋಗಲಿದ್ದಾರೆ ಅಂತಾ ಹೇಳಲಾಗಿತ್ತು. ಈ ಸುದ್ದಿ ಹರಡುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ, ಕೆಲವರ ಅಸಮಾಧಾನ ಕೂಡ ಸ್ಫೋಟವಾಗಿತ್ತು. ಆದ್ರೆ ಇದೀಗ ಶಾಸಕರ ಬದಲು ತಮ್ಮ ಆಪ್ತರೊಂದಿಗೆ ಸತೀಶ್ ಜಾರಕಿಹೊಳಿ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಅಂದ್ರೆ ದಸರಾ ವೇಳೆ ಕೆಲ ಶಾಸಕರ ಜೊತೆ ಪ್ರವಾಸಕ್ಕೆ ತೆರಳಲು ಜಾರಕಿಹೊಳಿ ಮುಂದಾಗಿದ್ದರು ಅಂತ ಹೇಳಲಾಗಿತ್ತು.
ಒಟ್ನಲ್ಲಿ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಭರ್ಜರಿ ಜಯ ಸಾಧಿಸಿ, 130ಕ್ಕೂ ಹೆಚ್ಚು ಸ್ಥಾನ ಗೆದ್ದು ಸರ್ಕಾರ ರಚಿಸಿದ್ದರೂ ಕಾಂಗ್ರೆಸ್ಗೆ ‘ಆಪರೇಷನ್’ ಭಯ ಕಾಡುತ್ತಿದೆ. ಅದ್ರಲ್ಲೂ ಈ ಬಾರಿ ಕಾಂಗ್ರೆಸ್ಗೆ ಬೆಳಗಾವಿ ರಾಜಕೀಯವೇ ದೊಡ್ಡ ಸವಾಲಾಗುತ್ತಿದೆ. ಅದನ್ನ ನಿಭಾಯಿಸಿ ಸರ್ಕಾರವನ್ನು ಬಲಪಡಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಆದರೂ ಒಳಗೊಳಗೆ, ಅಸಮಾಧಾನದ ಹೊಗೆ ಎದ್ದಿರುವುದು ಲೋಕಸಭೆ ಚುನಾವಣೆ ಸಮಯದಲ್ಲೇ ಕಾಂಗ್ರೆಸ್ನ ಕೇಂದ್ರ ನಾಯಕರಿಗೆ ಆತಂಕ ಹುಟ್ಟಿಸಿರುವುದು ಸುಳ್ಳಲ್ಲ.
ಜಾರಕಿಹೊಳಿ ಬ್ರದರ್ಸ್ ಬೆಳಗಾವಿ ರಾಜಕೀಯದಲ್ಲಿ ತಮ್ಮದೇ ಆದ ಹವಾ ಇಟ್ಟಿದ್ದು ಇದು ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಗೊತ್ತು. ಹಾಗೇ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟ ನಂತರ ಸತೀಶ್ ಜಾರಕಿಹೊಳಿ ಮತ್ತಷ್ಟು ಪ್ರಬಲರಾಗಿದ್ದಾರೆ.