ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಸರಿಗಮ ವಿಜಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇಂದು (ಜ.15) ಬೆಳಗ್ಗೆ ನಿಧನರಾಗಿದ್ದು, ಜ.16ರಂದು ಬೆಂಗಳೂರಿನ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿರುವ ಸರಿಗಮ ವಿಜಿ ಮೃತದೇಹವನ್ನು ಇಂದು ಮಧ್ಯಾಹ್ನ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ನಟನ ನಿವಾಸಕ್ಕೆ ಶಿಫ್ಟ್ ಮಾಡಲಿದ್ದಾರೆ. ಇನ್ನೂ ಜ.16ರ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸರಿಗಮ ವಿಜಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ಬಳಿಕ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
1980ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳವಳದ ಮಡಿಲಲ್ಲಿ’ ಚಿತ್ರಕ್ಕೆ ಸಣ್ಣ ಪಾತ್ರದಲ್ಲಿ ನಟಿಸುವುದರ ಮೂಲಕ ನಟನಾಗಿ ಗುರುತಿಸಿಕೊಂಡ ಸರಿಗಮ ವಿಜಿ ಆ ಬಳಿಕ 269 ಚಿತ್ರಗಳಲ್ಲಿ ನಟನೆ, 80 ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದರೆ, ಇವರ ನಟನೆಯ ಚಿತ್ರಗಳ ಪಟ್ಟಿಯಲ್ಲಿ ಟೈಗರ್ ಪ್ರಭಾಕರ್ ಚಿತ್ರಗಳೇ ಹೆಚ್ಚಾಗಿದೆ. ಟೈಗರ್ ಪ್ರಭಾಕರ್ ಜೊತೆ ಸರಿಗಮ ವಿಜಿ ವಿಶೇಷ ಬಾಂದವ್ಯ ಹೊಂದಿದ್ದರು.