ಊರಲ್ಲಿ ಮೆರವಣಿಗೆ ಖುಷಿ. ಸಂಜೆ ನಂತರ ರಾಸುಗಳೊಂದಿಗೆ ಕಿಚ್ಚು ಹಾಯಿಸಿದರೆ ಸಂಕ್ರಾಂತಿ ಹಬ್ಬದ ಸಡಗರಕ್ಕೆ ಮೆರಗು. ಮನೆ, ಬೀದಿ, ದೇವಸ್ಥಾನದ ಅಂಗಳ ಎಲ್ಲೆಲ್ಲೂ ಕಿಚ್ಚಿನ ಸಡಗರಗೋ ಸಡಗರ.
ಮೈಸೂರು ಮಾತ್ರವಲ್ಲದೇ ಹಳೆ ಮೈಸೂರು ಭಾಗದ ಬಹುತೇಕ ಜಿಲ್ಲೆಗಳಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವ ಸಂಪ್ರದಾಯವಿದೆ. ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮೀಣ ಭಾಗದಲ್ಲಿ ಇದು ಕೊಂಚ ಹೆಚ್ಚು. ಹಿಂಗಾರು ಫಸಲು ರಾಶಿಯಾಗಿ ಮನೆ ಸೇರುವ ಹೊತ್ತಲ್ಲಿ ರೈತರು ಸಂಭ್ರಮದಿಂದ ಆಚರಿಸುವ ಹಬ್ಬವಿದು.
ಮಕರ ಸಂಕ್ರಾಂತಿಯು ಭಾರತದಾದ್ಯಂತ ಜನವರಿ ತಿಂಗಳಲ್ಲಿ ಆಚರಿಸಲಾಗುವ ಸುಗ್ಗಿಯ ಹಬ್ಬ. ಇದನ್ನುಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಮೂಲಭೂತವಾಗಿ, ಹಬ್ಬವು ರೈತರು ಸೂರ್ಯ ದೇವರಿಗೆ ಗೌರವವನ್ನು ತೋರಿಸುವುದಾಗಿದೆ. ಸಂಕ್ರಾಂತಿಯು ಚಳಿಗಾಲದ ಅಂತ್ಯವನ್ನು ಮತ್ತು ದೀರ್ಘ ಬೇಸಿಗೆಯ ದಿನಗಳ ಆರಂಭವನ್ನು ಸೂಚಿಸುವ ದಿನ ಎಂದೇ ಗುರುತಿಸಲಾಗುತ್ತದೆ. ಸೂರ್ಯನ ಪಥ ಬದಲಾವಣೆಯೊಂದಿಗೆ ತಳುಕು ಹಾಕಿಕೊಂಡಿರುವುದು ಮಕರ ಸಂಕ್ರಾಂತಿ ನಂಟು. ಮಾಗಿ ಚಳಿ ತಗ್ಗಲಾರಂಭಿಸುವ ಸಮಯ ಆರಂಭದ ಹೊತ್ತಿದು. ನದಿಗಳಲ್ಲಿ ಉತ್ತರಾಯಣ ಪುಣ್ಯಕಾಲದ ಸ್ನಾನ ಮಾಡುವ ಸಮಯವೂ ಹೌದು.
ಕೃಷಿ ಎಂದರೆ ಅಲ್ಲಿ ರಾಸುಗಳು ಇರಲೇಬೇಕು. ರಾಸುಗಳಿಲ್ಲದೇ ಕೃಷಿ ಇಲ್ಲ ಎನ್ನುವ ಗಾಢವಾದ ಕಾಲವಿತ್ತು. ಈಗ ಯಂತ್ರದ ಯುಗ. ಎಲ್ಲವೂ ಕೃತಕಬುದ್ದಿಮತ್ತೆ ಯಂತ್ರವೇ ಮಾಡುತ್ತಿರುವಾಗ ರಾಸುಗಳಿಗೇನು ಕೆಲಸ ಎಂದು ನಾವು ಕೇಳುವ ಹಂತಕ್ಕೆ ಹೋಗಿದ್ದೇವೆ. ಇದು ನಗರಗಳ ಸ್ಥಿತಿಯಾದರೂ ಕೆಲವು ನಗರಗಳಲ್ಲಿ ಹಳ್ಳಿಗಳ ಜೀವನವೇ ಇನ್ನೂ ಇದೆ. ಹಳ್ಳಿಗಳಲ್ಲಿ ಇನ್ನೂ ಜಾನುವಾರು ಪೋಷಿಸುವ ಸಂಸ್ಕೃತಿ ಗಟ್ಟಿಯಾಗಿದೆ. ರಾಸುಗಳೇ ಬಹುತೇಕರಿಗೆ ಸಂಗಾತಿ. ಮನೆ ಮಕ್ಕಳಂತೆಯೇ ಅವುಗಳನ್ನೂ ನೋಡಿಕೊಳ್ಳುವ ಕುಟುಂಬಗಳೂ ಅಧಿಕ.
ಹಸು, ಹೋರಿ, ಎತ್ತುಗಳಿರುವ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರೋ ಜೋರು. ಮೈ ಕೊರೆವ ಚಳಿಯನ್ನು ಲೆಕ್ಕಿಸದೇ ನಸುಕಿನಲ್ಲೇ ಜಾನುವಾರು ಮೈ ತೊಳೆಯಲು ಕೆರೆ-ಕಟ್ಟೆ, ನಾಲೆ ಹಾಗೂ ನೀರಿರುವ ಬಳಿ ಹೋಗುವ ಕುಟುಂಬದವರು ಹೋಗುತ್ತಾರೆ. ಹಿರಿಯ ಪುರುಷರು, ಯುವಕರು ಸಂಭ್ರಮದಿಂದ ರಾಸುಗಳನ್ನು ಸ್ವಚ್ಚ ಮಾಡುತ್ತಾರೆ. ಮೈ ತೊಳೆವ ವೇಳೆಯಲ್ಲೇ ಜಾನುವಾರುಗಳ ಕೊಂಬನ್ನು ಹಸನುಗೊಳಿಸಿ, ಬಣ್ಣ ಹಚ್ಚುತ್ತಾರೆ. ಕಾಲುಗಳು, ದೇಹಕ್ಕೂ ಬಣ್ಣದ ಲೇಪನ ಮಾಡಿ ಅಲಂಕಾರಗೊಳಿಸಿ ಸಂಭ್ರಮಿಸುತ್ತಾರೆ. ಬಹುಪಾಲು ಅರಿಶಿಣ ಇಲ್ಲವೇ ಹಳದಿ ಬಣ್ಣವನ್ನು ಲೇಪಿಸಿದರೆ, ಕೊಂಬುಗಳಿಗೆ ಮಾತ್ರ ಇತರೆ ಬಣ್ಣ ಹಚ್ಚುತ್ತಾರೆ. ಮರಳಿ ಮನೆಗೆ ಕರೆತಂದು ಕೊಂಬುಗಳಿಗೆ ಬಲೂನು, ಜಡೆಗೆ ಕಟ್ಟುವ ಅಲಂಕಾರಿಕ ವಸ್ತುಗಳನ್ನು ಕಟ್ಟಿ ಮೆರಗು ನೀಡುತ್ತಾರೆ.
ಮಧ್ಯಾಹ್ನದ ಊಟದ ನಂತರ ಸಂಜೆಯಿಂದಲೇ ಶುರುವಾಗೋದು ಕಿಚ್ಚು ಹಾಯಿಸುವ ಖುಷಿ. ಗ್ರಾಮದ ದೇವಸ್ಥಾನದ ಬಳಿ ಕಿಚ್ಚು ಹಾಯಿಸೋದು ಹಿರಿಯರು, ಕಿರಿಯರನ್ನು ಒಟ್ಟಿಗೆ ಕರೆತಂದಿದ್ದು ನೋಡಲು ಚೆಂದ. ಎತ್ತುಗಳೊಂದಿಗೂ ತಾವು ಹೊಸ ಬಟ್ಟೆ ಹಾಕಿಕೊಂಡು ಬರುವವರೂ ಅಧಿಕ. ಈಗಲೂ ಇದು ಹಳೆ ಮೈಸೂರು ಭಾಗದಲ್ಲಿ ಬಲು ಜನಪ್ರಿಯ.ಅಲಂಕೃತ ಜಾನುವಾರುಗಳನ್ನು ಮುಸ್ಸಂಜೆಯ ವೇಳೆ ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ, ಒಂದೆಡೆ ಹುಲ್ಲು ಹರಡಿ, ಅದಕ್ಕೆ ಬೆಂಕಿ ಹಾಕಿ, ಅದರಿಂದ ಹೊರ ಬರುವ ಕಿಚ್ಚು ಹಾಯಿಸುವುದು ಮೈಸೂರು ಭಾಗದ ಸಂಕ್ರಾಂತಿಯ ಸಂಭ್ರಮ-ವೈಶಿಷ್ಟ್ಯದಲ್ಲೊಂದು. ಎತ್ತುಗಳನ್ನು ಮೊದಲು ಬೆಂಕಿಯ ಮೇಲೆ ಹಾರುವಂತೆ ಮಾಡಲಾಗುತ್ತದೆ. ಎತ್ತುಗಳ ನಂತರ, ಹಸುಗಳು, ಎಮ್ಮೆಗಳು ಮತ್ತು ಕುರಿಗಳಂತಹ ಇತರ ಜಾನುವಾರುಗಳು ಬೆಂಕಿಯಲ್ಲಿ ಉಳಿದಿದ್ದನ್ನು ಅಡ್ಡಲಾಗಿ ನಡೆಯುವಂತೆ ಮಾಡಲಾಗುತ್ತದೆ. ಜಾನುವಾರುಗಳ ಮಾಲೀಕರು ಪ್ರಾಣಿಗಳೊಂದಿಗೆ ಬೆಂಕಿಯನ್ನು ದಾಟುತ್ತಾರೆ. ರಾಸುಗಳಿಗೂ ಚಳಿಗಾಲದಲ್ಲಿ ತಗುಲಿರಬಹುದಾದ ಉಣ್ಣಿ ಮತ್ತು ಚಿಗಟಗಳನ್ನು ಸ್ವಚ್ಛಗೊಳಿಸಿ ಸಂಜೆ ಕಿಚ್ಚು ಹಾಯಿಸುವ ಮೂಲಕ ದೂರವಾಗಿಸುವ ಉದ್ದೇಶ ಇದರ ಹಿಂದೆ ಇದೆ.
ಬೆಂಕಿ ಮತ್ತು ಹೊಗೆಯು ಅವುಗಳ ದೇಹಕ್ಕೆ ಚೈತನ್ಯ ನೀಡಲಿ. ಮುಂದಿನ ವರ್ಷವಿಡೀ ನಮ್ಮ ಬದುಕನ್ನು ಹಸನು ಮಾಡುತ್ತಾ ರಾಸುಗಳೂ ಖುಷಿಯಾಗರಲಿ ಎನ್ನುವ ಸದಾಶಯವೂ ಇದೆ.