ಬೆಳಗಾವಿ: ಸಂಜಯ್ ಪಾಟೀಲ್ ನನಗೆ ಅಲ್ಲ, ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಇದುಎಂದು ಮಾಜಿ ಶಾಸಕ ಸಂಜಯ್ ಪಾಟೀಲ ಹೇಳಿಕೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಂಜಯ್ ಪಾಟೀಲ್ ನನಗೆ ಅಲ್ಲ, ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಇದು. ನಾನು ಲಿಂಗಾಯತ ಸಮಾಜದ ಹೆಣ್ಣುಮಗಳು.
ಲಿಂಗಾಯತ ಸಮಾಜಕ್ಕೆ ಮಾಡಿದ ಅವಮರ್ಯಾದೆ ಇದು. ಇಡೀ ರಾಜ್ಯದ ಮಹಿಳೆಯರಿಗೆ ಧಿಕ್ಕರಿಸಲು ಕರೆ ಕೊಡುತ್ತೇನೆ. ಮಹಿಳೆಯ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಮಹಿಳೆಯರ ಸಬಲೀಕರಣ ವಿರೋಧಿಗಳು ಬಿಜೆಪಿಯವರು. ಗ್ಯಾರಂಟಿ ಯೋಜನೆಯ ಬಗ್ಗೆಯೂ ವಿರೋಧ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ, ‘ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದೀರಿ. ಅದರಿಂದ ಅವರಿಗೆ ಇಂದು ನಿದ್ದೆ ಬರುದಿಲ್ಲ. ಹೀಗಾಗಿ ಇಂದು ರಾತ್ರಿ ಮಾತ್ರೆ ಜತೆಗೆ ಒಂದು ಎಕ್ಸ್ಟ್ರಾ ಪೆಗ್ ಹೊಡಿಬೇಕು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.