ಚೆನ್ನೈ ಟೆಸ್ಟ್ನಲ್ಲಿ ಬೆಂಚ್ ಕಾದಿದ್ದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಿಸಬೇಕೆಂದು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಆಗ್ರಹಿಸಿದ್ದಾರೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಕುಲ್ದೀಪ್ ಯಾದವ್ಗೆ ಅವಕಾಶ ನೀಡಿರಲಿಲ್ಲ. ಇವರ ಬದಲಿಗೆ ಸ್ಪಿನ್ ಬೌಲಿಂಗ್ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅವರನ್ನು ಆಡಿಸಲಾಗಿತ್ತು. ಅದರಂತೆ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಇಬ್ಬರೂ ಆಲ್ರೌಂಡರ್ ಪ್ರದರ್ಶನದ ಮೂಲಕ ತಂಡವನ್ನು ಗೆಲ್ಲಿಸಿದರು.
ಕುಲ್ದೀಪ್ ಯಾದವ್ ಅವರು 2017ರಿಂದ ಇಲ್ಲಿಯವರೆಗೂ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 53 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಯಾದವ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಈ ಸರಣಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ 19 ವಿಕೆಟ್ಗಳನ್ನು ಕಿತ್ತಿದ್ದರು ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಕೆಲ ನಿರ್ಣಾಯಕ ರನ್ಗಳನ್ನು ಗಳಿಸಿದ್ದರು. ಇದರ ಹೊರತಾಗಿಯೂ ಚೆನ್ನೈನ ಟೆಸ್ಟ್ನಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ಗೆ ಅವಕಾಶ ನೀಡುವ ಸಲುವಾಗಿ ಕುಲ್ದೀಪ್ ಯಾದವ್ ಅವರನ್ನು ಕೈ ಬಿಡಲಾಗಿತ್ತು.
“ಕುಲ್ದೀಪ್ ಯಾದವ್ ಅವರನ್ನು ಸುಲಭವಾಗಿ ಮೊದಲನೇ ಟೆಸ್ಟ್ನಿಂದ ಕೈ ಬಿಡಬಾರದಿತ್ತು. ಚೆನ್ನೈನ ಪಿಚ್ ಟರ್ನಿಂಗ್ ಅಲ್ಲವಾದರೂ ಅವರನ್ನು ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಡಿಸಬೇಕಾಗಿತ್ತು. ಏಕೆಂದರೆ ಪಂದ್ಯದ ಒಂದು ಅಥವಾ ಒಂದೂವರೆ ದಿನ ಮಾತ್ರ ಪಿಚ್ ಫಾಸ್ಟ್ ಬೌಲರ್ಗಳಿಗೆ ನೆರವು ನೀಡಿತ್ತಷ್ಟೆ. ಒಂದೂವರೆ ದಿನದ ಬಳಿಕ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡಿತ್ತು. ಈ ಹಿನ್ನೆಲೆಯಲ್ಲಿ ಕುಲ್ದೀಪ್ ಯಾದವ್ ಅವರು ಆಡಿದ್ದರೆ, ಸುಲಭವಾಗಿ ವಿಕೆಟ್ ಪಡೆಯುತ್ತಿದ್ದರು,” ಎಂದು ಸಂಜಯ್ ಮಾಂಜ್ರೇಕರ್ ತಿಳಿಸಿದ್ದಾರೆ.