ನವದೆಹಲಿ:- ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಡಿ.10ರಂದು ಕೊನೆಗೊಳ್ಳಲಿರುವ ಹಿನ್ನೆಲೆ ನೂತನ RBI ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ ಆಗಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ಗೆ ನೂತನ ಗವರ್ನರ್ ನೇಮಕವಾಗಿದ್ದು, ಮೂರು ವರ್ಷಗಳ ಅವಧಿಗೆ ಭಾರತೀಯ ರಿಸರ್ವ್ ಬ್ಯಾಂಕ್ನ 26 ನೇ ಗೌವರ್ನರ್ ಆಗಿ ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಡಿಸೆಂಬರ್ 11ರಂದು ಬುಧವಾರ ರಿಸರ್ವ್ ಬ್ಯಾಂಕ್ನ ಮುಂದಿನ ಗವರ್ನರ್ ಆಗಿ ಮಲ್ಹೋತ್ರಾ ಅಧಿಕಾರ ಸ್ವೀಕರಿಸಲಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಅವರು ಕೇಂದ್ರೀಯ ಬ್ಯಾಂಕ್ ಅನ್ನು ಮುನ್ನಡೆಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
2018ರ ಡಿ.12ರಂದು ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಅವರ ಹಠಾತ್ ನಿರ್ಗಮನದ ನಂತರ, RBIನ 25ನೇ ಗವರ್ನರ್ ಆಗಿ ಶಕ್ತಿಕಾಂತ ದಾಸ್ ನೇಮಕಗೊಂಡಿದ್ದರು. ಮೂರು ವರ್ಷ ಅಧಿಕಾರ ಪೂರ್ಣಗೊಳಿಸಿದ ಬಳಿಕ 2ನೇ ಅವಧಿಗೂ ಅವರನ್ನ ಮುಂದುವರಿಸಲಾಗಿತ್ತು.
ಸಂಜಯ್ ಮಲ್ಹೋತ್ರಾ ಅವರು 1990ರ ಬ್ಯಾಚ್ನ ರಾಜಸ್ಥಾನ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್ಇಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಅಲ್ಲದೇ ತೆರಿಗೆ ಸಂಗ್ರಹ ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಾಣುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.