ಬಿಗ್ ಬಾಸ್ ಸೀಸನ್ನ ‘ಸಿಂಹಿಣಿ’ ಎಂದೇ ಪ್ರಸಿದ್ಧರಾಗಿದ್ದ ಸಂಗೀತಾ, ತಮ್ಮ ನೇರ ಮಾತು, ದಿಟ್ಟ ನಿಲುವಿನಿಂದ ಜನರ ಮೆಚ್ಚುಗೆ ಗಳಿಸಿದ್ದರು.
ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು. ಮುಖ್ಯವೇದಿಕೆಯಲ್ಲಿ ನಿಂತಿದ್ದ ಮೂವರು ಸ್ಪರ್ಧಿಗಳ ಮುಖದಲ್ಲಿ ಆತಂಕ ಎದ್ದು ಕಾಣಿಸುತ್ತಿತ್ತು. ಸ್ಪರ್ಧಿಗಳ ಮುಖದಲ್ಲಿಯಷ್ಟೇ ಅಲ್ಲ, ವೇದಿಕೆಯ ಪಕ್ಕ ಕೂತ ಹಿಂದಿನ ಸ್ಪರ್ಧಿಗಳು, ಎದುರಿನಲ್ಲಿನ ಪ್ರೇಕ್ಷರು ಎಲ್ಲರ ಮುಖದಲ್ಲಿಯೂ ಆತಂಕ ಎದ್ದು ಕಾಣಿಸುತ್ತಿತ್ತು.
ಎಲ್ಲರ ಊಹೆಯನ್ನು ಬ್ರೇಕ್ ಮಾಡಿ ಹೊರಗೆ ಬಿದ್ದಿದ್ದು ಸಂಗೀತಾ ಶೃಂಗೇರಿ. ಫಿನಾಲೆ ವೀಕ್ನಲ್ಲಿ ಇದ್ದ ಒಬ್ಬರೇ ಒಬ್ಬರು ಮಹಿಳಾ ಸ್ಪರ್ಧಿ ಸಂಗೀತಾ ಗಟ್ಟಿ ವ್ಯಕ್ತಿತ್ವದಿಂದಲೇ ತನ್ನ ದಾರಿ ನಿರ್ಮಿನಿಸಿಕೊಂಡವರು.
ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗುವುದಕ್ಕೂ ಹಿಂದೆ ಈ ಹೆಸರು ಕೇಳಿದಾಗ ಮನಸಲ್ಲಿ ಎರಡು ಬಗೆಯ ಚಿತ್ರಗಳು ಮೂಡುತ್ತಿತ್ತು. ಒಂದು, ಪೌರಾಣಿಕ ಧಾರಾವಾಹಿಯೊಂದರ ದೇವಿ ಪಾತ್ರದ ಸೌಮ್ಯಮುಖ. ಇನ್ನೊಂದು ‘ಚಾರ್ಲಿ 777’ ಸಿನಿಮಾದ ನಾಯಕಿಯ ಮುಗ್ಧ ಮುಖ. ಮೆಲುವಾಗಿ ಮಾತಾಡುವ, ಮಿತವಾಗಿ ನಗುವ ಈ ಹುಡುಗಿ ಬಿಗ್ಬಾಸ್ ಮನೆಗೆ ಬಂದಾಗ ಪ್ರೇಕ್ಷಕರ ಹುಬ್ಬುಗಳು ಮೇಲೇರಿದ್ದವು.
ಆದರೆ ಬಿಗ್ ಬಾಸ್ ಸೀಸನ್ 10 ಮುಗಿದ ಈ ಕ್ಷಣದಲ್ಲಿ ಅದೇ ‘ಸಂಗೀತಾ ಶೃಂಗೇರಿ’ ಎಂಬ ಹೆಸರು ಕೇಳಿದರೆ ಮನಸಲ್ಲಿ ಮೂಡುವ ಚಿತ್ರಗಳು ಒಂದೆರಡಲ್ಲ. ನೂರಾರು ಅದರಲ್ಲಿಯೂ ಮೇಲೆ ಹೇಳಿದ ಎರಡು ಬಗೆಯ ಚಿತ್ರಗಳಂತೂ ಕಾಣಿಸುವುದೇ ಇಲ್ಲ. ದೊಡ್ಮನೆಯ 2ನೇ ರನ್ನರ್ ಅಪ್ ಆಗಿ ಸಂಗೀತಾ ಹೊರಹೊಮ್ಮಿದ್ದಾರೆ.