ಪಾಕಿಸ್ತಾನ ತಂಡದ ಯುವ ಆಲ್ರೌಂಡರ್ ಸಲ್ಮಾನ್ ಅಲಿ ಆಘ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಬದುಕಿನ 3ನೇ ಶತಕ ಬಾರಿಸಿದ್ದಾರೆ. ಇಲ್ಲಿನ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟದಲ್ಲಿ ಸಲ್ಮಾನ್ ಅಲಿ ಆಘ ಎದುರಿಸಿದ 119 ಎಸೆತಗಳಲ್ಲಿ ಅಜೇಯ 104 ರನ್ ಬಾರಿಸಿದರು.
ಬಿರುಸಿನ ಬ್ಯಾಟಿಂಗ್ ನಡೆಸಿದ ಸಲ್ಮಾನ್ ಅಲಿ ಆಘ 10 ಫೋರ್ ಮತ್ತು 3 ಸಿಕ್ಸರ್ಗಳೊಂದಿಗೆ ಶತಕ ಪೂರೈಸುವುದರ ಜೊತೆಗೆ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಬದುಕಿನಲ್ಲಿ 1000 ರನ್ಗಳ ಗಡಿ ಕೂಡ ದಾಟಿದರು. ಮೊದಲ ದಿನದ ಅಂತ್ಯಕ್ಕೆ ಪಾಕಿಸ್ತಾನ ತಂಡ 318/4 ರನ್ ಬಾರಿಸಿತ್ತು. ಎರಡನೇ ದಿನದಲ್ಲಿ ಪಾಕಿಸ್ತಾನ ತಂಡ 393 ರನ್ ಗಳಿಸುವ ಹೊತ್ತಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಶತಕ ಎದುರು ನೋಡುತ್ತಿದ್ದ ಆಲ್ರೌಂಡರ್ ಸೌದ್ ಶಕೀಲ್ 82 ರನ್ ಗಳಿಸಿ ಔಟಾದರು. ಆದರೆ, ಅಮೋಘ ಆಟವಾಡಿದ ಸಲ್ಮಾನ್ ಶರವೇಗದಲ್ಲಿ ಶತಕ ಪೂರೈಸಿದರು.
ಫಾಸ್ಟ್ ಬೌಲರ್ ಶಾಹೀನ್ ಶಾ ಅಫ್ರಿದಿ ಜೊತೆಗೂಡಿ 85 ರನ್ಗಳ ಅಮೂಲ್ಯ ಜೊತೆಯಾಟವನ್ನಾಡಿದರು. ಅಫ್ರಿದಿ 26 ರನ್ಗಳ ಕೊಡುಗೆ ನೀಡಿದರು. ಪರಿಣಾಮ ಪಾಕಿಸ್ತಾನ ತಂಡ 550 ರನ್ಗಳ ಗಡಿ ದಾಟಲು ಸಾಧ್ಯವಾಯಿತು. ಇದಕ್ಕೂ ಮುನ್ನ ಪಂದ್ಯದ ಮೊದಲ ದಿನದಾಟದಲ್ಲಿ ಆರಂಭಿಕ ಬ್ಯಾಟರ್ ಅಬ್ದುಲ್ಲಾ ಶಫೀಕಿ (102) ಮತ್ತು ಕ್ಯಾಪ್ಟನ್ ಶಾನ್ ಮಸೂದ್ (151) ಶತಕ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದ್ದರು.
ಬಳಿಕ ಎರಡನೇ ದಿನ ಕೊನೇ ಅವಧಿಯಲ್ಲಿ ಮೊದಲ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್, ಆರಂಭದಲ್ಲೇ ಓಪನರ್ ಮತ್ತು ಕ್ಯಾಪ್ಟನ್ ಓಲ್ಲೀ ಪೋಪ್ (0) ವಿಕೆಟ್ ಕಳೆದುಕೊಂಡು ಕಂಗಾಲಾಯಿತು. ಆದರೂ, ಝ್ಯಾಕ್ ಕ್ರಾವ್ಲೀ (64*) ಮತ್ತು ಜೋ ರೂಟ್ (32*) ಅವರ ಮನಮೋಹಕ ಜೊತೆಯಾಟದ ನೆರವಿನಿಂದ ದಿನದ ಅಂತ್ಯಕ್ಕೆ 20 ಓವರ್ಗಳಲ್ಲಿ 96/1 ರನ್ ಗಳಿಸಿದೆ.
ಸಲ್ಮಾನ್ ತಮ್ಮ ವೃತ್ತಿಬದುಕಿನ 15ನೇ ಟೆಸ್ಟ್ ಪಂದ್ಯದಲ್ಲಿ 1000 ಟೆಸ್ಟ್ ರನ್ಗಳ ಗಡಿ ದಾಟಿದ್ದಾರೆ. 46.95ರ ಸರಾಸರಿಯಲ್ಲಿ ಸಲ್ಮಾನ್ ಒಟ್ಟಾರೆ 1033 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 7 ಅರ್ಧಶತಕಗಳಿವೆ. ಸಲ್ಮಾನ್ ಅಲಿ ಆಘ ತವರಿನಲ್ಲಿ ಉತ್ತಮ ಲಯ ಹೊಂದಿದ್ದಾರೆ. ತವರಿನಲ್ಲಿ ಆಡಿದ ಪಂದ್ಯಗಳಲ್ಲಿ ಒಟ್ಟಾರೆ 588 ರನ್ಗಳನ್ನು ಬಾರಿಸಿದ್ದಾರೆ. 2021ರ ಬಳಿಕ ತವರಿನಲ್ಲಿ ಪಾಕಿಸ್ತಾನ ತಂಡ ಒಂದು ಟೆಸ್ಟ್ ಪಂದ್ಯವನ್ನೂ ಗೆದ್ದಿಲ್ಲ. ಇದೀಗ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ 3ನೇ ಆವೃತ್ತಿಯ ಭಾಗವಾಗಿ ನಡೆಯುತ್ತಿರುವ ಸರಣಿಯಲ್ಲಿ ಇಂಗ್ಲೆಂಡ್ ಎದುರು ಗೆಲುವು ಎದುರು ನೋಡುತ್ತಿದೆ.