ಸೈಪ್ ಅಲಿ ಖಾನ್ ಮನೆಗೆ ನುಗ್ಗಿದ ದರೋಡೆ ಕೋರ ತನ್ನನ್ನು ಹಿಡಿಯಲು ಬಂದ ಸೈಫ್ ಅಲಿ ಖಾನ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದ. ಸೈಫ್ ಅವರ ಮೇಲೆ 6 ಭಾರಿ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದು ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಓರ್ವ ಆಟೋ ಚಾಲಕ. ಐಷಾರಾಮಿ ಕಾರುಗಳು ಇದ್ದರೂ, ದೊಡ್ಡ ದೊಡ್ಡ ಮಂದಿಯ ಸಂಪರ್ಕ ಇದ್ದರೂ, ಕೋಟ್ಯಂತರ ರೂಪಾಯಿ ಹಣ ಇದ್ದರೂ ಕೂಡ ಸೈಫ್ ಜೀವ ಉಳಿಸಿದ್ದು ಇದೇ ಆಟೋ ಚಾಲಕ ಭಜನ್ ಸಿಂಗ್ ರಾಣ.
ಸೈಫ್ ಜೀವ ಉಳಿಸಿದ ಆಟೋ ಚಾಲಕನ ಬಗ್ಗೆ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂತೆಯೇ ತನ್ನ ಜೀವ ಉಳಿಸಿ ಆಟೋ ಚಾಲಕನನ್ನು ನಟ ಸೈಫ್ ಅಲಿ ಖಾನ್ ಭೇಟಿ ಮಾಡಿದ್ದು ಆತನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಈ ಭೇಟಿಯ ಬಳಿಕ ಭಜನ್ ಸಿಂಗ್ ರಾಣ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ಇಂದು ನನ್ನನ್ನು ಆಹ್ವಾನಿಸಿದ್ದರು. ಅದರಿಂದ ನನಗೆ ತುಂಬ ಖುಷಿ ಆಯಿತು. ವಿಶೇಷ ಏನೂ ಇಲ್ಲ. ಇದೊಂದು ಸಾಮಾನ್ಯ ಭೇಟಿ. ಬೇಗ ಗುಣಮುಖರಾಗಲಿ ಅಂತ ಪಾರ್ಥಿಸಿದ್ದೆ. ಇಂದು ಕೂಡ ಅದೇ ರೀತಿ ಪ್ರಾರ್ಥನೆ ಮಾಡಿದ್ದೇನೆ ಎಂದು ಅವರಿಗೆ ನಾನು ಹೇಳಿದೆ’ ಎಂದಿದ್ದಾರೆ.
ಘಟನೆ ನಡೆದ ದಿನ ಗಾಯಗೊಂಡು ತನ್ನ ಆಟೋದಲ್ಲಿ ಕುಳಿತಿರುವುದು ಬಾಲಿವುಡ್ ಚಿತ್ರರಂಗದ ಖ್ಯಾತ ನಟ, ಕೋಟ್ಯಾಂತರ ರೂಪಾಯಿಗಳ ಒಡೆಯ ಸೈಫ್ ಅಲಿ ಖಾನ್ ಅನ್ನೋದು ಆಟೋ ಚಾಲಕ ಭಜನ್ ಸಿಂಗ್ ರಾಣ ಅವರಿಗೆ ಗೊತ್ತೇ ಇಲ್ಲ. ಏನೋ ಅವಘಡ ಆಗಿದೆ ಎಂಬುದು ಮಾತ್ರ ಅವರಿಗೆ ಗೊತ್ತಿತ್ತು. ಈ ಅವಘಡಲ್ಲಿ ತಾವು ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೇನೋ ಎಂಬ ಭಯ ಅವರಿಗೆ ಇತ್ತು. ಆ ಭಯದಲ್ಲೂ ಅವರು ಸಹಾಯಕ್ಕೆ ಧಾವಿಸಿದ್ದರು. ಆದರೂ ಅದ್ಯಾವುದನ್ನು ಲೆಕ್ಕಿಸದೆ ಓರ್ವ ವ್ಯಕ್ತಿಯ ಪ್ರಾಣ ಉಳಿಸಲು ಮುಂದಾದ ಆಟೋ ಚಾಲಕನಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.