ಬೆಳಗಾವಿ: “ಮಹಾತ್ಮ ಗಾಂಧೀಜಿ ಭಾರತದ ಆತ್ಮ. ವಿಶ್ವಕ್ಕೆ ಶಾಂತಿ, ಸಹಬಾಳ್ವೆ ಹೇಳಿಕೊಟ್ಟ ಪರಮಾತ್ಮ. ಇಂದು, ಮುಂದು, ಎಂದೆಂದೂ ನಮ್ಮದು ಗಾಂಧಿ ಮಂತ್ರ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಶಿವಕುಮಾರ್ ಅವರು ದೇಶಕ್ಕೆ ಗಾಂಧೀಜಿ ಅವರ ಕೊಡುಗೆಯನ್ನು ಸ್ಮರಿಸಿದರು. “ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು ದೇಶದ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದರು. ಈಗ ನೂರು ವರ್ಷಗಳ ನಂತರ ಈ ಐತಿಹಾಸಿಕ ಕಾರ್ಯಕ್ರಮವನ್ನು ನಡೆಸಿ ಮುಂದಿನ ಪೀಳಿಗೆಗೆ ಗಾಂಧೀಜಿ ಅವರ ತತ್ವ, ಆದರ್ಶವನ್ನು ಸಾರಲು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡುತ್ತಿದ್ದೇವೆ”. “ಇದು ದೇಶದ ಜನರು, ದೇಶದ ಐಕ್ಯತೆ, ಸಮಗ್ರತೆಗೆ ಗಾಂಧೀಜಿ, ಅಂಬೇಡ್ಕರ್ ಸ್ಮರಣೆ ಹಾಗೂ ಸಂವಿಧಾನ ರಕ್ಷಣೆ ಈ ಸಮಾವೇಶದ ಮುಖ್ಯ ಉದ್ದೇಶ. ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ಇವು ಕೇವಲ ಘೋಷಣೆಗಳಲ್ಲ, ಭಾರತದ ಶಕ್ತಿ ಮಂತ್ರಗಳು. ಇತ್ತೀಚೆಗೆ ನಾವು ಸಂಕ್ರಾಂತಿ ಹಬ್ಬ ಆಚರಿಸಿದ್ದೇವೆ. ಸಂಕ್ರಾಂತಿ ಎಂದರೆ ಹೊಸತನ, ಹೊಸ ಹುರುಪು, ಹೊಸ ಉತ್ಸಾಹ”ವಾಗಿದೆ ಎಂದರು. “ಅಂದು ಮಹಾತ್ಮ ಗಾಂಧೀಜಿ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಕುಳಿತ ಸ್ಥಾನದಲ್ಲಿ ಇಂದು ಕನ್ನಡನಾಡಿನ ವರಪುತ್ರ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ” ಎಂದು ತಿಳಿಸಿದರು.
ಸುವರ್ಣಸೌಧದಲ್ಲಿ ಬಾಪೂ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಮಲ್ಲಿಕಾರ್ಜುನ ಖರ್ಗೆ
“1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಕ್ರಾಂತಿ ಆಗಿ, ಹುರುಪು ತಂದಿತ್ತು. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದರು. ಅಂಬೇಡ್ಕರ್ ಸಂವಿಧಾನ ಕೊಟ್ಟರು. ಗಾಂಧಿ ಭಾರತ ಎಂದರೆ ಸ್ವಾಭಿಮಾನಿಗಳ ಭಾರತ, ಏಕತೆಯ ಭಾರತ, ಸಾಮರಸ್ಯದ ಬದುಕಿನ ಭಾರತ, ಜಾತ್ಯತೀತ ಭಾರತ, ಸರ್ವೋದಯ ಭಾರತ ವೆಂದರು. “ನಮ್ಮ ಹೆಗಲ ಮೇಲೆ ಕೇಸರಿ, ಬಿಳಿ, ಹಸಿರಿನ ಕಾಂಗ್ರೆಸ್ ಶಾಲಿದೆ. ಎದೆಯ ಒಳಗೆ ಪವಿತ್ರ ಸಂವಿಧಾನವಿದೆ. ಇದನ್ನು ನಾವು ಮರೆಯಲು ಸಾಧ್ಯವಿಲ್ಲ. ಸಂವಿಧಾನವೇ ನಮ್ಮ ತಂದೆ ತಾಯಿ, ಸಂವಿಧಾನವೇ ನಮ್ಮ ಬಂಧು ಬಳಗ, ಸಂವಿಧಾನವೇ ನಮ್ಮ ಧರ್ಮಗ್ರಂಥ. ಭಗವದ್ಗೀತೆ, ಬೈಬಲ್, ಕುರಾನ್ ಧರ್ಮ ಗ್ರಂಥಗಳಂತೆ ನಮಗೆ ಶ್ರೇಷ್ಠ ಗ್ರಂಥ ನಮ್ಮ ಸಂವಿಧಾನ” ಎಂದು ತಿಳಿಸಿದರು. “ನನ್ನ ದೇಹ ಸತ್ತರೂ ನಾನು ಭಾರತದ ಸಂವಿಧಾನದ ರೂಪದಲ್ಲಿ ಬದುಕಿರುತ್ತೇನೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಅವರು ಈಗ ಜೈ ಭೀಮ್ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ. ಸುಳ್ಳಿನ ವಿರುದ್ಧ ಹೋರಾಟ ಮಾಡಿದ ಮಹಾತ್ಮನ ವಿರುದ್ಧವೇ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ದುಷ್ಟರಿಂದ ಗಾಂಧಿ ಚಿಂತನೆಗಳನ್ನು ಉಳಿಸಬೇಕು. ಗೂಡ್ಸೆ ಚಿಂತನೆಗಳನ್ನು ನಾಶ ಮಾಡಬೇಕು. ಗಾಂಧೀಜಿ ತತ್ವಗಳನ್ನು ರಕ್ಷಿಸಬೇಕು” ಎಂದು ಕರೆ ನೀಡಿದರು.