ಡಮಾಸ್ಕಸ್: ಆಂತರಿಕ ಸಂಘರ್ಷಕ್ಕೆ ಒದ್ದಾಡುತ್ತಿರುವ ಸಿರಿಯಾ ಇದೀಗ ಸಂಪೂರ್ಣವಾಗಿ ಬಂಡುಕೋರರ ವಶಕ್ಕೆ ಸಿಲುಕಿದೆ. ಬಂಡುಕೋರರ ಆಡಳಿತ ಶುರುವಾಗುತ್ತಿದ್ದಂತೆ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ದೇಶದಿಂದ ಪಲಾಯನ ಮಾಡಿದ್ದು ಸದ್ಯ ರಷ್ಯಾದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗುತ್ತಿದೆ.ಈ ಮಧ್ಯೆ ಸಿರಿಯಾದಲ್ಲಿ ಸಿಲುಕಿದ್ದ ಜಮ್ಮು-ಕಾಶ್ಮೀರದ ಯಾತ್ರಿಕರು ಸೇರಿದಂತೆ ಹಲವು ರಾಜ್ಯಗಳ 75 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಲೆಬನಾನ್ಗೆ ತೆರಳಿದ್ದಾರೆ ಮತ್ತು ವಾಣಿಜ್ಯ ವಿಮಾನಗಳ ಮೂಲಕ ಭಾರತಕ್ಕೆ ಮರಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಸ್ಥಳಾಂತರಗೊಂಡವರಲ್ಲಿ ಜಮ್ಮು ಮತ್ತು ಕಾಶ್ಮೀರದ 44 ಯಾತ್ರಾರ್ಥಿಗಳು ಸೇರಿದ್ದಾರೆ. ಅವರು ಸೈದಾ ಜೈನಾಬ್ನಲ್ಲಿ ಸಿಲುಕಿಕೊಂಡಿದ್ದರು ಎಂದು ಸಚಿವಾಲಯ ತಿಳಿಸಿದೆ.
ಸಿರಿಯಾದಲ್ಲಿರುವ ಭಾರತೀಯ ಪ್ರಜೆಗಳ ವಿನಂತಿಯ ಮೇರೆಗೆ ಸ್ಥಳಾಂತರ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಡಮಾಸ್ಕಸ್ ಮತ್ತು ಬೈರುತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗ ಸ್ಥಳಾಂತರಿಸುವಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಸ್ಥಳಾಂತರದ ನಂತರವೂ ಕೆಲ ಭಾರತೀಯರು ಸಿರಿಯಾದಲ್ಲಿಯೇ ಸಿಲುಕಿ ಹಾಕಿಕೊಂಡಿದ್ದು, ಡಮಾಸ್ಕಸ್ನಲ್ಲಿರುವ ರಾಯಭಾರ ಕಚೇರಿಯೊಂದಿಗೆ ಸಹಾಯವಾಣಿ ಸಂಖ್ಯೆ +963 993385973, ವಾಟ್ಸಾಪ್ ನಲ್ಲಿ ಮತ್ತು ಇಮೇಲ್ ಐಡಿ [email protected] ಮೂಲಕ ಸಂಪರ್ಕದಲ್ಲಿರಲು ಭಾರತೀಯ ಸರ್ಕಾರ ಅವರಿಗೆ ಸಲಹೆ ನೀಡಿದೆ.
ಸದ್ಯ ಸಿರಿಯಾದಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಹಯಾತ್ ತಹ್ರೀರ್ ಅಲ್-ಶಾಮ್ ಗುಂಪಿನ ನೇತೃತ್ವದ ಬಂಡಾಯ ಪಡೆಗಳು 12 ದಿನಗಳ ಆಕ್ರಮಣದ ನಂತರ ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡಿವೆ. ಬಂಡುಕೋರರು ಡಮಾಸ್ಕಸ್ಗೆ ವಶ ಮಾಡಿಕೊಂಡ ನಂತರ ಅಧ್ಯಕ್ಷ ಅಸ್ಸಾದ್ ರಷ್ಯಾಗೆ ಪಲಾಯನ ಮಾಡಿದ್ದಾರೆ. ಇತ್ತ ಬಂಡುಕೋರರು ಅಧ್ಯಕ್ಷರ ಮನೆ ಮೇಲೆ ದಾಳಿ ನಡೆಸಿ ಹಾನಿ ನಡೆಸಿದ್ದಾರೆ.