ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಿಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಇಂದಿನಿಂದ ಸಫಾರಿ ಶುರುವಾಗಿದ್ದು ಸ್ಥಳೀಯ ಶಾಸಕ ಎಂ.ಆರ್. ಮಂಜುನಾಥ್ ರಿಂದ ಚಾಲನೆ ದೊರಕಿತು. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ಪಿಜಿ ಪಾಳ್ಯ ವನ್ಯಜೀವಿ ವಲಯದ ಸಫಾರಿಗೆ ಲೊಕ್ಕನಹಳ್ಳಿ ಬಳಿ ಇಂದು ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಶಾಸಕರು ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ಪಿಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಸಫಾರಿ ಆರಂಭವಾಗಿರುವುದರಿಂದ ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚಿನ ಅವಕಾಶವಾಗಲಿದೆ. ಕೊಳ್ಳೇಗಾಲ ಪಟ್ಟಣದಿಂದ ಸಫಾರಿ ಪ್ರದೇಶಕ್ಕೆ 24 ಕಿ.ಮೀ ದೂರವಿದೆ. ಮೈಸೂರಿನಿಂದ ಪಿಜಿ ಪಾಳ್ಯಕ್ಕೆ 90 ಕಿ.ಮೀ ಅಂತರ ವಿರುವುದರಿಂದ ಪ್ರವಾಸಿಗರು ಸಫಾರಿಗೆ ಬರಲು ಅನುಕೂಲವಾಗಲಿದೆ ಎಂದರು.
ಹನೂರು ಭಾಗದಲ್ಲಿ ಗುಂಡಾಲ್ ಜಲಾಶಯ, ಇನ್ನಿತರ ಪ್ರವಾಸಿ ತಾಣಗಳನ್ನು ಪ್ರವಾಸಿಗರು ವೀಕ್ಷಿಸಬಹುದಾಗಿದೆ. ಈ ಭಾಗದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದರಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆ. ಹೀಗಾಗಿ ಸಫಾರಿ ಆರಂಭವಾಗಿರುವುದು ಉತ್ತಮ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಕಾಡು ಉಳಿಯಬೇಕು ಪರಿಸರ ಸ್ನೇಹಿ ಪ್ರವಾಸೋದ್ಯಮವು ಅಭಿವೃದ್ದಿಯಾಗಬೇಕು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆರಂಭಿಸಿರುವ ಸಫಾರಿ ಯಶಸ್ವಿಯಾಗಿ ಮುಂದುವರೆಯಲೆಂದು ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಹಾರೈಸಿದರು.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗವು ಕೊಳ್ಳೇಗಾಲ ಮತ್ತು ಹನೂರು ತಾಲೂಕಿನಲ್ಲಿ 949.469 ಚದರ ಕಿ.ಮೀ ಗಳಷ್ಟು ಅರಣ್ಯ ಪ್ರದೇಶವನ್ನು ಒಳಗೊಂಡಿದೆ. ಆನೆ, ಹುಲಿ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕರಡಿ, ತೆರಕರಡಿ, ತೋಳ, ನರಿ ಮುಂತಾದ ಪ್ರಾಣಿಗಳು ಸಫಾರಿ ಕೈಗೊಳ್ಳುವ ಪ್ರದೇಶದಲ್ಲಿ ವಾಸಿಸುತ್ತಿವೆ. ಪಿಜಿ ಪಾಳ್ಯ ವನ್ಯಜಿವಿ ವಲಯದ ಲೊಕ್ಕನಹಳ್ಳಿ ಕಳ್ಳಬೇಟೆ ತಡೆ ಶಿಬಿರದ ಮಾರ್ಗದ ಒಟ್ಟು 18 ಕಿ.ಮೀ ವ್ಯಾಪ್ತಿಯಲ್ಲಿ ಸಫಾರಿ ಕೈಗೊಳ್ಳಲಾಗುತ್ತದೆ ಎಂದು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಾಣಾಧಿಕಾರಿ ಡಾ. ಸಂತೋಷ್ ಕುಮಾರ್ ಅವರು ತಿಳಿಸಿದ್ದಾರೆ.
ಬೆಳಿಗ್ಗೆ 6 ರಿಂದ 9ರವರೆಗೆ, ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆಯವರೆಗೆ ಸಫಾರಿಗೆ ಸಮಯ ನಿಗದಿಪಡಿಸಲಾಗಿದೆ. ವಯಸ್ಕರಿಗೆ 400 ರೂ., ಮಕ್ಕಳಿಗೆ 200 ರೂ., ಸಫಾರಿ ಶುಲ್ಕ ಇದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9481995509 ಮತ್ತು 9008581495, ಇ-ಮೇಲ್ ಡಿಜಿoಠಿgಠಿಚಿಟಥಿಚಿ@gmಚಿiಟ.ಛಿom ಸಂಪರ್ಕಿಸುವಂತೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಾಣಧಿಕಾರಿ ಡಾ. ಸಂತೋಷ್ ಕುಮಾರ್ ಅವರು ತಿಳಿಸಿದ್ದಾರೆ.