ಬೆಂಗಳೂರು:– ಮಾಜಿ ಸಿಎಂ ಡಿ.ವಿ ಸದಾನಂದಗೌಡ MP ಟಿಕೆಟ್ ಮಿಸ್ ಆಗಿದೆ. ಸದಾನಂದಗೌಡ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡುತ್ತಿರುವುದಾಗಿ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರೆ ಮಾಡಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಸದಾನಂದಗೌಡ, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ವಿಚಾರವಾಗಿ ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ಮಾಡಿದ್ದರು. ಬೆಂಗಳೂರು ಉತ್ತರಕ್ಕೆ ಹೊಸ ಹೆಸರು ನಿಶ್ಚಯ ಮಾಡಿದ್ದೇವೆಂದರು. ಒಂದೇ ಹೆಸರಿದ್ದರೂ ಯಾಕೆ ಬದಲಾವಣೆ ಎಂದು ನಡ್ಡಾಗೆ ಪ್ರಶ್ನಿಸಿದೆ. ಕೆಲ ತಂತ್ರಗಾರಿಕೆ ಕಾರಣಕ್ಕೆ ಬದಲಾವಣೆ ಮಾಡಿದ್ದೇವೆಂದು ಹೇಳಿದರು. ನಂತರ ಬಿಜೆಪಿ ಅಧ್ಯಕ್ಷ ನಡ್ಡಾರನ್ನು ಏನು ಪ್ರಶ್ನೆ ಮಾಡಲು ಹೋಗಲಿಲ್ಲ ಎಂದು ಹೇಳಿದ್ದಾರೆ.
ನನಗೆ ಟಿಕೆಟ್ ನಿರಾಕರಿಸಿರುವ ಬಗ್ಗೆ ವಿಶ್ಲೇಷಣೆ ಮಾಡಲು ಹೋಗಲ್ಲ. ರಾಜಕೀಯ ಜೀವನದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ. ಚುನಾವಣಾ ರಾಜಕೀಯದಿಂದ ದೂರವಿರುವೆ ಅಷ್ಟೇ. ಚುನಾವಣಾ ರಾಜಕೀಯದಿಂದ ದೂರಾಗುವುರಿಂದ ನನಗೆ ನೋವಿಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿರಬೇಕು ಎಂದು ನನ್ನ ಮನಸ್ಸಿನಲ್ಲಿದೆ ಎಂದಿದ್ದಾರೆ.
ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು. ನಂತರ ನನ್ನ ತೀರ್ಮಾನವನ್ನು ನಾನು ಮಾಡುತ್ತೇನೆ. ಪಕ್ಷದಲ್ಲಿ ನಾನು ಎಲ್ಲಾ ಹುದ್ದೆ ಅಲಂಕರಿಸಿದ್ದೇನೆ. ಪ್ರಧಾನಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಬಿಟ್ಟು ಬೇರೆ ಎಲ್ಲಾ ಹುದ್ದೆಗಳು ನನಗೆ ಬಂದಿವೆ. ಸಾಯುವವರೆಗೂ ಶವದ ಮೇಲೆ ಬಿಜೆಪಿ ಧ್ವಜ ಬೇಕು ಎಂಬ ಆಸೆ ನನಗೆ ಇಲ್ಲ. ಬೆಂಗಳೂರು ಉತ್ತರಕ್ಕೆ ಯಾರು ಅಭ್ಯರ್ಥಿ ಆಗಬೇಕು ಅಂತಾ ನಾನು ಹೇಳಲು ಹೋಗುವುದಿಲ್ಲ ಎಂದರು.