ವಾರದಲ್ಲಿ 90 ಗಂಟೆ ಕೆಲಸ ಮಾಡುವಂತೆ ತಮ್ಮ ಸಿಬ್ಬಂದಿಗೆ ಸೂಚಿಸುವ ಮೂಲಕ ಎಲ್ ಆ್ಯಂಡ್ ಟಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಅವರು ಭಾರೀ ವಿವಾದವೊಂದಕ್ಕೆ ಗುರಿಯಾಗಿದ್ದಾರೆ. ಇದೀಗ ಸುಬ್ರಹ್ಮಣ್ಯನ್ ಹೇಳಿಕೆಗೆ ದೀಪಿಕಾ ಪಡುಕೋಣೆ ತಿರುಗೇಟು ನೀಡಿದ್ದಾರೆ.
‘ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲದಿರುವುದಕ್ಕೆ ನನಗೆ ವಿಷಾದ ಇದೆ. ನಾನು ಭಾನುವಾರವೂ ಕೆಲಸ ಮಾಡುತ್ತೇನೆ. ನೀವೂ ಕೂಡ ಭಾನುವಾರ ಕೆಲಸ ಮಾಡಿದರೆ ನನಗೆ ಹೆಚ್ಚು ಖುಷಿಯಾಗುತ್ತದೆ. ಪ್ರತಿ ಉದ್ಯೋಗಿ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು’ ಎಂದು ಸುಬ್ರಮಣ್ಯನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ದೀಪಿಕಾ ಟೀಕಿಸಿದ್ದಾರೆ. ‘ಅವರು ಪರಿಸ್ಥಿತಿಯನ್ನು ಮತ್ತಷ್ಟು ಕೆಟ್ಟದಾಗಿ ಮಾಡಿದ್ದಾರೆ’ ಎಂದಿದ್ದಾರೆ.
ವಾರಕ್ಕೆ 90 ಗಂಟೆ ಕೆಲಸ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ಈ ರೀತಿ ಮಾಡಿದಾಗ ವ್ಯಕ್ತಿಯ ಆರೋಗ್ಯದ ಮೇಲೆ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಆ ರೀತಿ ಆಗಬಾರದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಕೂಡ ಸುಬ್ರಮಣ್ಯನ್ ಅವರು ‘ಭಾನುವಾರವೂ ಉದ್ಯೋಗಿಗಳು ಕೆಲಸ ಮಾಡಬೇಕು’ ಎಂದಿದ್ದರು. ಆ ಸಂದರ್ಭದಲ್ಲೂ ದೀಪಿಕಾ ಪ್ರತಿಕ್ರಿಯಿಸಿದ್ದರು. ‘ಇಷ್ಟು ದೊಡ್ಡ ಪೋಸ್ಟ್ನಲ್ಲಿ ಇರುವವರು ಈ ರೀತಿಯ ಹೇಳಿಕೆ ನೀಡುವುದನ್ನು ನೋಡಿದರೆ ಶಾಕ್ ಆಗುತ್ತದೆ’ ಎಂದು ಹೇಳಿದ್ದರು. ಭಾನುವಾರವೂ ಕೆಲಸ ಮಾಡಬೇಕು ಎಂದಿದ್ದಲ್ಲದೆ ಸುಬ್ರಮಣ್ಯಮ್ ಅವರು, ‘ಉದ್ಯೋಗಿಗಳು ಮನೆಯಲ್ಲಿದ್ದುಕೊಂಡು ಏನು ಮಾಡುತ್ತಾರೆ’ ಎಂದು ಪ್ರಶ್ನೆ ಮಾಡಿದ್ದರು.
‘‘ಭಾನುವಾರವೂ ಸೇರಿದಂತೆ ವಾರದ 7 ದಿನವೂ ಕೆಲಸ ಮಾಡಿ. ಮನೆಯಲ್ಲಿ ಸುಮ್ಮನೆ ಕುಳಿತು ಏನು ಮಾಡುತ್ತೀರಿ? ಎಷ್ಟು ಹೊತ್ತು ಪತ್ನಿ ಮುಖವನ್ನೇ ನೋಡುತ್ತ ಕೂತಿರುತ್ತೀರಿ? ಎದ್ದೇಳಿ, ಕಚೇರಿಗೆ ಬನ್ನಿ, ಕೆಲಸ ಆರಂಭಿಸಿ,’’ ಎಂದು ಅವರು ಕರೆ ನೀಡಿದ್ದರು. ಈ ವಿಡಿಯೋ ಜಾಲತಾಣದಲ್ಲಿಎಲ್ಲೆಡೆ ಹರಿದಾಡುತ್ತಿದೆ. ವ್ಯಾಪಕ ಟೀಕೆಗೆ ಗುರಿಯಾಗಿದೆ.