ಚೀನಾ ಹಾಗೂ ಜಪಾನ್ ಜನನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಜನನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ರಷ್ಯಾ ಕೂಡ ಇದೀಗ ತನ್ನದೇ ಆದ ಹೊಸ ಕೆಲಸಕ್ಕೆ ಮುಂದಾಗಿದೆ. ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ವಿದ್ಯಾರ್ಥಿನಿಯರಿಗೆ ರಷ್ಯಾ 100,000 ರೂಬಲ್ಸ್ಗಳನ್ನು (ಅಂದಾಜು 81,000 ರೂ.) ನೀಡುತ್ತಿದೆ ಎಂದು ವರದಿಯಾಗಿದೆ,
ಈ ಯೋಜನೆಯ ಅರ್ಹತೆ ಪಡೆಯಲು, ಅರ್ಜಿದಾರರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ಥಳೀಯ ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಪೂರ್ಣ ಸಮಯದ ವಿದ್ಯಾರ್ಥಿಗಳಾಗಿರಬೇಕು ಮತ್ತು ಕರೇಲಿಯಾ ನಿವಾಸಿಗಳಾಗಿರಬೇಕು ಎಂದು ಸರ್ಕಾರ ಹೇಳಿದೆ.
ಸತ್ತ ಮಗುವಿಗೆ ಜನ್ಮ ನೀಡುವ ತಾಯಂದಿರಿಗೆ ಈ ಬೋನಸ್ ಲಭ್ಯವಿಲ್ಲ ಎಂದು ಕಾನೂನು ಸ್ಪಷ್ಟವಾಗಿ ಹೇಳಿದೆ. ಆದಾಗ್ಯೂ, ಎಸ್ಐಡಿಎಸ್ ನಿಂದಾಗಿ ಮಗು ಮರಣಹೊಂದಿದರೆ ಈ ಹಣವನ್ನು ಹಿಂಪಡೆಯಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದಲ್ಲದೆ, ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ಜನ್ಮ ನೀಡುವ ತಾಯಂದಿರು ಈ ಯೋಜನೆಯ ಲಾಭ ಪಡೆಯುತ್ತಾರೆಯೇ ಅಥವಾ ಮಗುವಿನ ಆರೈಕೆ ಮತ್ತು ಪ್ರಸವಾನಂತರದ ಚೇತರಿಕೆಯ ವೆಚ್ಚಗಳಿಗೆ ಸಹಾಯ ಮಾಡಲು ಹೆಚ್ಚುವರಿ ಬೋನಸ್ ನೀಡಲಾಗುತ್ತದೆಯೇ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿಲ್ಲ.
ರಷ್ಯಾದ ಜನನ ದರವು ಗಮನಾರ್ಹವಾಗಿ ಕುಸಿತ ಕಂಡಿದ್ದು, ಇದು 25 ವರ್ಷಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದೆ. 2024ರ ಮೊದಲಾರ್ಧದಲ್ಲಿ, ಕೇವಲ 599,600 ಮಕ್ಕಳು ಜನಿಸಿದ್ದಾರೆ. 2023 ರಲ್ಲಿ ಇದೇ ಅವಧಿಗೆ ಹೋಲಿಸಿದರೆ 16,000 ಜನನಗಳು ಇಳಿಕೆಯಾಗಿವೆ. ರಷ್ಯಾದ ಜನನ ಪ್ರಮಾಣವು ಕುಸಿಯುತ್ತಿರುವುದು ‘ದೇಶದ ಭವಿಷ್ಯಕ್ಕೆ ದುರಂತ’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.