ಬಾಕು: 38 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಕಝಾಕಿಸ್ತಾನ ವಿಮಾನ ದುರಂತಕ್ಕೆ ರಷ್ಯಾ ಕಾರಣ ಎಂದು ಅಜರ್ ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ವಾರ ಕಝಾಕಿಸ್ತಾನ್ನಲ್ಲಿ ಅಪಘಾತಕ್ಕೀಡಾಗಿ 38 ಜನರ ಸಾವಿಗೆ ಕಾರಣವಾದ ಅಜೆರ್ಬೈಜಾನ್ ಏರ್ಲೈನ್ಸ್ ವಿಮಾನ ದುರಂತಕ್ಕೆ ರಷ್ಯಾ ಕಾರಣವಾಗಿದೆ. ರಷ್ಯಾ ಪಡೆಗಳು ಸಿಡಿಸಿದ ಗುಂಡಿನ ದಾಳಿಯಿಂದಾಗಿಯೇ ವಿಮಾನ ಪತನವಾಗಿದೆ ಎಂದು ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಆರೋಪಿಸಿದ್ದಾರೆ.
ಅಪಘಾತಕ್ಕೀಡಾದ ವಿಮಾನ ರಷ್ಯಾದ ಗುಂಡಿನ ದಾಳಿಗೆ ತುತ್ತಾಗಿತ್ತು. ಪತನಗೊಂಡ ವಿಮಾನದ ಹೊರಭಾಗದಲ್ಲಿ ಗುಂಡಿನದಾಳಿಯ ಕುರುಹುಗಳು ಪತ್ತೆಯಾಗಿವೆ ಎಂದು ಅಜೆರ್ಬೈಜಾನ್ ಅಧ್ಯಕ್ಷರು ಹೇಳಿದ್ದಾರೆ. ರಷ್ಯಾದ ಗುಂಡಿನ ದಾಳಿಯಿಂದಾಗಿಯೇ ವಿಮಾನ ಪತನವಾಗಿದ್ದು, ಅಪಘಾತದ ಕಾರಣವನ್ನು ಮರೆಮಾಡಲು ಮಾಸ್ಕೋ ಪ್ರಯತ್ನಿಸಿದೆ. ದುರಂತದಲ್ಲಿ ರಷ್ಯಾ “ತಪ್ಪಿತಸ್ಥ” ಎಂದು ಒಪ್ಪಿಕೊಳ್ಳಬೇಕೆಂದು ಎಂದು ಅವರು ಒತ್ತಾಯಿಸಿದ್ದಾರೆ.
ರಷ್ಯಾದ “ಕೆಲವು ವಲಯಗಳು” ಅಪಘಾತದ ಕಾರಣಗಳ ಬಗ್ಗೆ ಸುಳ್ಳು ನಿರೂಪಣೆಗಳನ್ನು ಬಿತ್ತುವ ಮೂಲಕ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿವೆ. ರಷ್ಯಾದ ಕಡೆಯವರು ಈ ವಿಷಯವನ್ನು ಮುಚ್ಚಿಹಾಕಲು ಬಯಸುತ್ತಿದ್ದಾರೆ ಎಂದು “ಸ್ಪಷ್ಟವಾಗಿ ತೋರಿಸುವ” “ಸಿದ್ಧಾಂತಗಳನ್ನು” ಮಾಸ್ಕೋ ಮುಂದಿಟ್ಟಿದೆ. ವಾಸ್ತವವೆಂದರೆ ಅಜೆರ್ಬೈಜಾನ್ ನಾಗರಿಕ ವಿಮಾನವು ಗ್ರೋಜ್ನಿ ನಗರದ ಬಳಿ ರಷ್ಯಾದ ಭೂಪ್ರದೇಶದ ಮೇಲೆ ಹೊರಗಿನಿಂದ ಹಾನಿಗೊಳಗಾಗಿದೆ ಮತ್ತು ಆಗ ಬಹುತೇಕ ನಿಯಂತ್ರಣ ಕಳೆದುಕೊಂಡಿದೆ.
ರಷ್ಯಾದ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು ನಮ್ಮ ವಿಮಾನವನ್ನು ನಿಯಂತ್ರಣ ತಪ್ಪಿಸಿವೆ ಎಂದು ನಮಗೆ ತಿಳಿದಿದೆ. ಅದೇ ಸಮಯದಲ್ಲಿ, ನೆಲದಿಂದ ಬಂದ ಗುಂಡೇಟಿನ ಪರಿಣಾಮವಾಗಿ, ವಿಮಾನದ ಬಾಲವೂ ತೀವ್ರವಾಗಿ ಹಾನಿಗೊಳಗಾಯಿತು ಎಂದು ಅಲಿಯೆವ್ ದೂರದರ್ಶನದಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.