ಶಿಡ್ಲಘಟ್ಟ: ದೈಹಿಕ ಹಾಗು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ, ಕ್ರೀಡೆಗೆ ಯಾವುದೇ ವಯೋಮಾನದ ಅಂತರವಿಲ್ಲ ಎಂದು ಕರ್ನಾಟಕ ಯುವ ಸಂಘಸಂಸ್ಥೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಪ್ರಸಾದ್ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಬಳ್ಳಾಪುರ ಹಾಗು ಕರ್ನಾಟಕ ರಾಜ್ಯ ಯುವ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ 2024-25 ನೇ ಸಾಲಿನ ಗ್ರಾಮೀಣ ಕ್ರೀಡೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಹಿಂದೆ ಗ್ರಾಮಗಳಲ್ಲಿ ಅನೇಕ ವಿಧವಾದ ಗುಂಪು ಕ್ರೀಡೆಗಳನ್ನು ಆಡುತ್ತಿದ್ದರು. ಆಧುನೀಕರಣ, ಜಾಗತಿಕ ಕ್ಷಿಪ್ರ ಬೆಳವಣಿಗೆಯಿಂದ ಇಂದು ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ. ಸರ್ಕಾರದ ಪ್ರೋತ್ಸಾಹದಿಂದ ಇಂತಹ ಮತ್ತಷ್ಟು ಕ್ರೀಡಾ ಉತ್ಸವಗಳು ಗ್ರಾಮಗಳಲ್ಲಿ ನಡೆಯುವಂತಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ನಂತರ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ವಿ. ವೆಂಕಟೇಶ್ , ನಮ್ಮ ದೇಶದಲ್ಲಿ ಪ್ರಾಚ್ಯ ವಸ್ತುಗಳನ್ನು ರಕ್ಷಿಸುವಂತೆ ದೇಸಿ ಕ್ರೀಡೆಗಳನ್ನು ರಕ್ಷಿಸುವ ಕಾಲ ಬಂದಿದೆ ಹಾಗಾಗಿ ಗ್ರಾಮಗಳ ಪ್ರತಿಯೊಬ್ಬರೂ ತಮ್ಮ ಪೂರ್ವಜರು ಆಡುತ್ತಿದ್ದಂತಹ ಕ್ರೀಡೆಗಳನ್ನು ಪುನರಾರಂಭಿಸುವ ಮೂಲಕ ಅವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ರವಾನಿಸಬೇಕು ಎಂದುರು. ರಾಷ್ಟ್ರೀಯ ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಕ್ರೀಡೆಗಳಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಗ್ರಾಮೀಣ ಭಾಗದಲ್ಲಿ ಒಟ್ಟಾಗಿ ಕ್ರೀಡೆಗಳಲ್ಲಿ ಭಾಗವಿಸುವುದರಿಂದ ಜಾತಿ, ಭೇಧ, ಮೇಲು ಕೀಳು ಎಂಬ ಭಾವನೆಗಳು ದೂರವಾಗಿ ಸ್ನೇಹ ಸೌಹಾರ್ದತೆ ಏರ್ಪಡುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂ ಅಧ್ಯಕ್ಷೆ ನಾಗಮಣಿ ದೇವರಾಜ್, ಉಪಾಧ್ಯಕ್ಷ ಬಿಕೆ, ಡಿವಿಕುಮಾರ್, ಸಹನಾ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಭಾರತಿ ಆಂಜಿನಪ್ಪ, ಗಂಗಾಧರ ಬಿನ್ನಮಂಗಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.