ರಾಯಚೂರು: ರಾಜ್ಯದ ವಿದ್ಯುತ್ ಬೇಡಿಕೆಯ ಹೆಚ್ಚಿನ ಭಾಗವನ್ನು ಪೂರೈಕೆ ಮಾಡುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್ಟಿಪಿಎಸ್)ದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಪರಿಣಾಮ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. ಇದರಿಂದಾಗಿ ರಾಜ್ಯದ ವಿದ್ಯುತ್ ಪೂರೈಕೆ ಏರುಪೇರಾಗುವ ಸಾಧ್ಯತೆ ಇದ್ದು, ಭಾರೀ ಆತಂಕ ತಲೆದೋರಿದೆ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿರುವ ತಲಾ 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಒಂದು, ಎರಡು, ಮೂರು ಮತ್ತು ಆರನೇ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸಿವೆ. ಈ ಘಟಕಗಳಲ್ಲಿರುವ ಬಂಕ್ಲರ್ ಹಾಗೂ ಬಾಯ್ಲರ್ ಟ್ಯೂಬ್ನಲ್ಲಿ ಸೋರಿಕೆ ಕಾಣಿಸಿಕೊಂಡಿದ್ದು, ಈ ಸಮಸ್ಯೆಯಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದ ರಾಜ್ಯದ ವಿದ್ಯುತ್ ಪೂರೈಕೆಯಲ್ಲಿ ಏಕಾಏಕಿ 840 ಮೆಗಾ ವ್ಯಾಟ್ನಷ್ಟು ಇಳಿಕೆಯಾಗಿದೆ.
ಪ್ರಸ್ತುತ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 4ನೇ ಘಟಕದಲ್ಲಿ 142 ಮೆಗಾ ವ್ಯಾಟ್, 5ನೇ ಘಟಕದಲ್ಲಿ 194 ಮೆಗಾ ವ್ಯಾಟ್, 7ನೇ ಘಟಕದಲ್ಲಿ 199 ಮೆಗಾ ವ್ಯಾಟ್ ಹಾಗೂ 8ನೇ ಘಟಕದಲ್ಲಿ 141 ಮೆಗಾ ವ್ಯಾಟ್ ಸೇರಿ ಒಟ್ಟು ಕೇವಲ 665 ಮೆಗಾ ವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಈ ಬಾರಿ ಬರಗಾಲದಿಂದಾಗಿ ವಿದ್ಯುತ್ ಬೇಡಿಕೆ ಗಗನಕ್ಕೇರಿದೆ. ಬೇಸಿಗೆಯ ಈ ದಿನಗಳಲ್ಲಿ ಬೇಡಿಕೆ ಹೆಚ್ಚಳವಾಗುತ್ತಿರುವಾಗಲೇ, ದೊಡ್ಡ ಪ್ರಮಾಣದ ವಿದ್ಯುತ್ ಪೂರೈಕೆ ಮಾಡುವ ಕಲ್ಲಿದ್ದಲು ಆಧಾರಿತ ಘಟಕಗಳು ತಾಂತ್ರಿಕ ಸಮಸ್ಯೆಗೆ ಗುರಿಯಾಗುತ್ತಿವೆ. ಇದು ವಿದ್ಯುತ್ ಪೂರೈಕೆ ಮತ್ತು ಬೇಡಿಕೆಯಲ್ಲಿ ಭಾರೀ ಸಮಸ್ಯೆ ತಂದೊಡ್ಡಿದೆ.
ಒಂದೆಡೆ ಮಳೆ ಕೊರತೆಯಿಂದಾಗಿ ಈ ಬಾರಿ ರಾಜ್ಯದ ಜಲಾಶಯಗಳು ಬರಿದಾಗಿವೆ. ಇದರಿಂದ ಜಲಾಧಾರಿತ ವಿದ್ಯುತ್ ಘಟಕಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇಂಥ ಹೊತ್ತಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನೇ ರಾಜ್ಯ ಹೆಚ್ಚಾಗಿ ಅವಲಂಬಿಸಿತ್ತು. ಆದರೆ, ಇದೀಗ ಒಂದೇ ಬಾರಿಗೆ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 4 ಘಟಕಗಳು ಸ್ಥಗಿತಗೊಂಡಿದ್ದು, ಲೋಡ್ ಶೆಡ್ಡಿಂಗ್ನ ಆತಂಕ ತಲೆದೋರುವಂತೆ ಮಾಡಿದೆ.