ಬೆಂಗಳೂರು, ಜನವರಿ 07: ಚಿತ್ರಕಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಾರಿ 50 ಲಕ್ಷ ರೂ.ಗಳ ಅನುದಾನವನ್ನು ಪರಿಷತ್ತಿಗೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಆಯೋಜಿಸಿರುವ 21 ನೇ ಚಿತ್ರ ಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಟ್ ಗ್ಯಾಲರಿ ಸ್ಥಾಪಿಸಲು ನೆರವು
ಎಲ್ಲಾ ಜಿಲ್ಲೆಗಳಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆ ಹಾಗೂ ಆರ್ಟ್ ಗ್ಯಾಲರಿ ಸ್ಥಾಪಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡಲಿದೆ ಎಂದರು. 2003 ರಿಂದ ಇಂದಿನವರೆಗೆ ಚಿತ್ರಸಂತೆ ಆಚರಣೆಯಾಗುತ್ತಿದೆ. ಈ ವರ್ಷ 21 ನೇ ಚಿತ್ರಸಂತೆ ನಡೆದಿದೆ. ಹಿಂದೆ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಪ್ರತಿ ವರ್ಷ ಚಿತ್ರಸಂತೆಯನ್ನು ಉದ್ಘಾಟಿಸಿದ್ದೇನೆ ಎಂದು ಸ್ಮರಿಸಿದರು.
22 ರಾಜ್ಯಗಳಿಂದ 1600 ಕಲಾವಿದರು
ಪ್ರತಿ ವರ್ಷ 3 ರಿಂದ 4 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. 22 ರಾಜ್ಯಗಳಿಂದ 1600 ಕಲಾವಿದರು ಪಾಲ್ಗೊಳ್ಳುವುದು ಹೆಮ್ಮೆಯ ವಿಷಯ. ಈ ಬಾರಿ ಚಿತ್ರಸಂತೆಯನ್ನು ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಮರ್ಪಣೆಯಾಗಿರುವುದು ಅವರಿಗೆ ಸಲ್ಲಿಸಿರುವ ವಿಶೇಷವಾದ ಗೌರವ ಸೂಚಿಸುತ್ತದೆ ಎಂದರು. ಚಿತ್ರಸಂತೆಯಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಕರ್ನಾಟಕದ ಪರವಾಗಿ ಸ್ವಾಗತಿಸಿದರು. ಸಚಿವರಾದ ಹೆಚ್.ಕೆ.ಪಾಟೀಲ್ , ಸುಧಾಕರ್ , ಶಾಸಕರಾದ ರಿಜ್ವಾನ್ ಅರ್ಷದ್, ಅಜಯ್ ಸಿಂಗ್ , ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್, ಉಪಾಧ್ಯಕ್ಷ ಪ್ರಭಾಕರ್ ಉಪಸ್ಥಿತರಿದ್ದರು.