ಮುಂಬೈ: ಮಹಾರಾಷ್ಟ್ರ ಚುನಾವಣೆಗಾಗಿ ಹಿನ್ನೆಲೆ ಕಾಂಗ್ರೆಸ್, ಶಿವಸೇನಾ (ಉದ್ಧವ್ ಠಾಕ್ರೆ ಬಣ), NCP (ಶರದ್ ಪವಾರ್ ಬಣ) ಮಹಾ ವಿಕಾಸ್ ಅಘಾಡಿ ಮೈತ್ರಿ ಕೂಟವೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮೈತ್ರಿಕೂಟವು ಕರ್ನಾಟಕದ ಮಾದರಿಯಲ್ಲೇ ಹಲವು ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ. ಮಹಾರಾಷ್ಟ್ರದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಮೊದಲ 100 ದಿನಗಳ ಕಾರ್ಯಸೂಚಿಯನ್ನು ಹಾಕಿಕೊಂಡಿದೆ.
ಏನೇನು ಗ್ಯಾರಂಟಿ?
ಈ ಬಾರಿ ಮಹಾ ವಿಕಾಸ್ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದರೆ ʻಮಹಾಲಕ್ಷ್ಮಿʼ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಮಹಿಳೆಯರಿಗೆ ಕರ್ನಾಟಕದ ಮಾದರಿಯಲ್ಲೇ ಉಚಿತ ಬಸ್ ಸೇವೆ, 500 ರೂ. ದರದಲ್ಲಿ ವಾರ್ಷಿಕ 6 ಸಿಲಿಂಡರ್ ವಿತರಣೆ ಮಾಡಲಾಗುವುದು. ಅಲ್ಲದೇ ಮಹಿಳೆಯರ ಸುರಕ್ಷತೆಗಾಗಿ ಬಲವಾದ ಕಾನೂನುಗಳನ್ನು ರೂಪಿಸುವುದು, 9 ರಿಂದ 16 ವರ್ಷ ವಯಸ್ಸಿನ ಹುಡುಗಿಉರಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆ, ಪ್ರತಿ ತಿಂಗಳು 2 ದಿನಗಳ ರಜೆ ನೀಡಲಾಗುವುದು ಎಂದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.
ರೈತರಿಗೆ ʻಮಹಾʼ ಭರವಸೆ:
ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ಸಿಗುವಂತೆ ಯೋಜನೆ ಜಾರಿಗೆ ತರಲಾಗುವು. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನ ನೇಮಕ ಮಾಡಲಾಗುವುದು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲಾಗುವುದು, ಬೆಳೆ ವಿಮೆ ಯೋಜನೆಯನ್ನೂ ಜಾರಿಗೆ ತರಲಾಗುವುದು ಎಂದು ಕೂಟವು ಭರವಸೆ ನೀಡಿದೆ.ಅಲ್ಲದೇ ನಿರುದ್ಯೋಗಿ ಯುವಕರಿಗೆ ಮಾಸಿಕ 4,000 ರೂ. ಭತ್ಯೆ ನೀಡಲಾಗುವುದು, ರಾಜ್ಯ ವಿದ್ಯಾರ್ಥಿವೇತನ ಯೋಜನೆಗಳನ್ನು ವಿಸ್ತರಿಸಲಾಗುವುದು. ಆರೋಗ್ಯ ವಿಮಾ ಪಾಲಿಸಿಯನ್ನು ವಿಸ್ತರಿಸಲಾಗುವುದು. ಸಾಮಾಜಿಕ ನ್ಯಾಯದ ಅಡಿಯಲ್ಲಿ ಜಾತಿ ಜನಗಣತಿ ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.