ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ಥಾನದ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆಯ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಕೇವಲ 69 ಎಸೆತಗಳನ್ನು ಎದುರಿಸಿದ ರೋಹಿತ್ 11 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 121 ರನ್ ಕಲೆಹಾಕಿದರು. ಈ ಮೂಲಕ ಅನೇಕ ದಾಖಲೆಗಳನ್ನು ರೋಹಿತ್ ಸೃಷ್ಟಿಸಿದರು
ವಾಸ್ತವವಾಗಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಖಾತೆಯನ್ನೂ ತೆರೆಯದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ ರೋಹಿತ್ ಶರ್ಮಾ, ಈ ಚುಟುಕು ಮಾದರಿಯಲ್ಲಿ ಕಿಂಗ್ ಕೊಹ್ಲಿಯ ದಾಖಲೆಯನ್ನೂ ಮುರಿದರು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ನಾಯಕನಾಗಿ ಅಧಿಕ ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದುವರೆಗೆ ಕಿಂಗ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ 54ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ, 44 ರನ್ ಕಲೆಹಾಕುತ್ತಿದ್ದಂತೆ ಅಧಿಕ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದರು.