ದೆಹಲಿ: ನನ್ನ ವಿರುದ್ಧ ಮಾಡಿರುವ ಅವಹೇಳನಕಾರಿ ಪೋಸ್ಟ್ ಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಬಹುದು. ಆದರೆ ಇಂತಹ ಪೋಸ್ಟ್ ಗಳಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ, ನಾನು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ? ಹೀಗಾಗಿ ಐಪಿಎಸ್ ಡಿ.ರೂಪಾ ಬೇಷರತ್ ಕ್ಷಮೆ ಕೇಳಬೇಕು ಎಂದು ಐಎಎಸ್ ರೋಹಿಣಿ ಸಿಂಧೂರಿ (IAS Rohini Sinduri) ಪಟ್ಟು ಹಿಡಿದಿದ್ದಾರೆ.
ಡಿ.ರೂಪಾ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಿದ ರೋಹಿಣಿ ಸಿಂಧೂರಿ ಪರ ವಕೀಲರು, ಮಾನಹಾನಿಯಾಗುವ ರೀತಿಯಲ್ಲಿ ಪೋಸ್ಟ್ ಗಳನ್ನು ಮಾಡಲಾಗಿದೆ ಈ ಹಿನ್ನಲೆಯಲ್ಲಿ ಡಿ.ರೂಪಾ ಬೇಷರತ್ ಕ್ಷಮೆ ಕೋರುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ರೂಪಾ (D. Roopa) ಪರ ವಕೀಲರು, ರೋಹಿಣಿ ಸಿಂಧೂರಿ ಕೂಡಾ ಆರೋಪ ಮಾಡಿದ್ದಾರೆ. ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವಾದಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಸಿಂಧೂರಿ ಪರ ವಕೀಲರು, ಹೌದು ಬುದ್ಧಿ ಭ್ರಮಣೆಯಾದವರು ಈ ರೀತಿ ಪೊಸ್ಟ್ ಮಾಡುತ್ತಾರೆ. ಆದರೆ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಹೇಳಿಲ್ಲ ಅಂದ್ರು.
ವಾದ-ಪ್ರತಿವಾದ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾ.ಎ.ಎಸ್ ಓಕಾ (S Oka), ನೀವು ಒಂದು ನಿರ್ಧಾರಕ್ಕೆ ಬರಬೇಕು ಒಂದು ತಿಂಗಳ ಸಮಯ ನೀಡಲಾಗುವುದು, ಸೋಶಿಯಲ್ ಮೀಡಿಯಾದಿಂದ ಎಲ್ಲ ಪೋಸ್ಟ್ ಡಿಲೀಟ್ ಮಾಡಬೇಕು. ನಿಮಗೆ ಒಳ್ಳೆಯ ಭವಿಷ್ಯವಿದೆ. ಉಜ್ವಲ ಭವಿಷ್ಯದ ಕಾರಣದಿಂದ ಪ್ರಕರಣ ಇತ್ಯರ್ಥಕ್ಕೆ ಯೋಚಿಸಿದ್ದೇವೆ. ಆದರೆ ಭಾವನೆಗಳು ಅಧಿಕವಾಗಿದ್ದರೆ ನಾವು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಇಬ್ಬರೂ ಅಧಿಕಾರಿಗಳಿಗೆ ಬುದ್ಧಿ ಮಾತು ಹೇಳಿದರು.
ನ್ಯಾಯಧೀಶರ ಮಾತಿಗೆ ಒಪ್ಪದ ರೋಹಿಣಿ ಸಿಂಧೂರಿ ಪರ ವಕೀಲರು, ನಮಗೆ ಉಜ್ವಲ ಭವಿಷ್ಯವಿರಬಹುದು. ಆದರೆ ಈ ರೀತಿಯ ಮಾನಹಾನಿ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ?. ನಮ್ಮನ್ನು ಜನರು ಬೇರೆ ರೀತಿಯಲ್ಲೇ ನೋಡುತ್ತಾರೆ. ಈ ಹಂತದಲ್ಲಿ ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ ಎ.ಎಸ್ ಓಕಾ, ಮೌನವಾಗಿರಲು ಅಥವಾ ಅರ್ಜಿ ಹಿಂತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ. ಒಂದು ತಿಂಗಳು ಸಮಯ ನೀಡಲಾಗುವುದು ಫೆ.16ಕ್ಕೆ ಮುಂದಿನ ವಿಚಾರಣೆಗೆ ಪಟ್ಟಿ ಮಾಡಲಾಗುವುದು. ಅಲ್ಲಿಯ ತನಕ ಮಧ್ಯಂತರ ಆದೇಶ ಆದೇಶ ಮುಂದುವರಿಯಲಿದೆ. ಯಾರು ಯಾರ ವಿರುದ್ಧವೂ ಆರೋಪ ಪ್ರತ್ಯಾರೋಪ ಮಾಡಬಾರದು. ಸೋಶಿಯಲ್ ಮೀಡಿಯಾದಲ್ಲಿಯೂ ಪೋಸ್ಟ್ ಮಾಡುವಂತಿಲ್ಲ ಎಂದು ನ್ಯಾಯಾಧೀಶರು ಸೂಚಿಸಿದರು.