ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತ ತಂಡದ ಆರಂಭಿಕ ಋತುರಾಜ್ ಗಾಯಕ್ವಾಡ್, ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ನಲ್ಲಿ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದರು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಎದುರು ಅವರು ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಇಲ್ಲಿನ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಯಶಸ್ವಿ ಜೈಸ್ವಾಲ್ ಮತ್ತು ಇಶಾನ್ ಕಿಶನ್ ಬಹುಬೇಗ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಕೊನೆಯವರೆಗೂ ದೀರ್ಘಾವಧಿ ಬ್ಯಾಟ್ ಮಾಡಿದ ಋತುರಾಜ್ ಗಾಯಕ್ವಾಡ್ ಆಸೀಸ್ ಬೌಲರ್ಗಳಿಗೆ ಬೆವರಿಳಿಸಿದರು. ಕೇವಲ 52 ಎಸೆತಗಳಲ್ಲಿಯೇ ಗಾಯಕ್ವಾಡ್ ಶತಕವನ್ನು ಪೂರ್ಣಗೊಳಿಸಿದರು.
ತಮ್ಮ ಚೊಚ್ಚಲ ಟಿ20ಐ ಶತಕದ ಮೂಲಕ ಋತುರಾಜ್ ಗಾಯಕ್ವಾಡ್ ಭಾರತದ ಪರ ಇತಿಹಾಸ ಸೃಷ್ಟಿಸಿದರು. ಆಸ್ಟ್ರೇಲಿಯಾ ವಿರುದ್ದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಬಲಗೈ ಆಟಗಾರ ಬರೆದಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಘಟಾನುಘಟಿಗಳಿಂದಲೇ ಈ ಸಾಧನೆಯನ್ನು ಮಾಡಲಾಗಿಲ್ಲ.