‘ಕಾಂತಾರ’ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. ರಿಷಬ್ ಶೆಟ್ಟಿ ಈಗಾಗಲೇ ಒಂದು ತೆಲುಗು ಹಾಗೂ ಹಿಂದಿ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಮಧ್ಯೆ ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಜೊತೆ ಕೆಲಸ ಮಾಡುವ ಆಸೆ ಹೊರಹಾಕಿದ್ದಾರೆ.
ರಿಷಬ್ ಶೆಟ್ಟಿ ಅವರು ‘ದಿ ರಾಣಾ ದಗ್ಗುಬಾಟಿ ಶೋ’ನಲ್ಲಿ ಭಾಗಿ ಆಗಿದ್ದಾರೆ. ರಾಣಾ ಅವರು ಕುಂದಾಪುರಕ್ಕೆ ಬಂದು ಈ ಶೋನ ಶೂಟ್ ಮಾಡಿದ್ದಾರೆ. ಈ ಶೋನಲ್ಲಿ ಭಾಗಿ ಆದಾಗ ರಿಷಬ್ ಅವರು ಮನದಾಳದ ಆಸೆಯನ್ನು ಹೊರಹಾಕಿದ್ದಾರೆ. ರಿಷಬ್ ಶೆಟ್ಟಿ ನಟನೆಯ ಜೊತೆಗೆ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಓರ್ವ ನಿರ್ದೇಶಕನಾಗಿ ಮತ್ತೋರ್ವ ನಿರ್ದೇಶಕನ ಕೆಲಸವನ್ನು ಬಾಯ್ತುಂಬ ಹೊಗಳಿದ್ದಾರೆ.
‘ಸಂದೀಪ್ ಅವರ ರೀತಿ ಯೋಚಿಸಲು ಯಾರಿಂದಲೂ ಸಾಧ್ಯವಿಲ್ಲ. ಒಮ್ಮೆ ಆಲೋಚಿಸಿದಂತೆ ಅವರು ಮತ್ತೆ ಯೋಚಿಸಲು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತದೆ. ಅವರು ಮಾಡುತ್ತಿರುವ ಯಾವುದೇ ಸಿನಿಮಾದಲ್ಲಿ ಬೇಕಿದ್ದರೂ ನಾನು ನಟಿಸಲು ಸಿದ್ಧ’ ಎಂದಿದ್ದಾರೆ.
‘ನನ್ನ ಬಾಲ್ಯದಿಂದ ಒಂದು ಕನಸು ಇತ್ತು. ನನ್ನ ಗ್ರಾಮ ಕೆರಾಡಿಯಲ್ಲಿ ಹಾಗೂ ಇಲ್ಲಿನ ಕಾಡಿನಲ್ಲಿ ಸಿನಿಮಾ ಶೂಟ್ ಮಾಡಬೇಕು ಎಂಬ ಕನಸು ಇತ್ತು. ನಾನು ಸಾಕಷ್ಟು ಸಿನಿಮಾಗಳಿಗೆ ಈ ಜಾಗ ಬಳಸಿಕೊಳ್ಳಲು ಹೋದೆ. ಆದರೆ, ಹೊಂದಿಕೆ ಆಗಿಲ್ಲ. ಕೊನೆಗೆ ಕಾಂತಾರ ಸಿನಿಮಾ ಕಥೆಗೂ ಈ ಜಾಗಕ್ಕೂ ಹೊಂದಿಕೆ ಆಯಿತು. ಗ್ರಾಮದ 700 ಜನರು ಈ ಚಿತ್ರಕ್ಕಾಗ ಕೆಲಸ ಮಾಡಿದ್ದಾರೆ’ ಎಂದಿದ್ದಾರೆ.