ಬಾಂಗ್ಲಾದೇಶ ವಿರುದ್ಧ ಸೆಪ್ಟಂಬರ್ 19 ರಂದು ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯಕ್ಕೆ 16 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಭಾನುವಾರ ರಾತ್ರಿ ಪ್ರಕಟಿಸಿತ್ತು. ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಅವರು 21 ತಿಂಗಳುಗಳ ಬಳಿಕ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ರಿಷಭ್ ಪಂತ್ ಅವರು ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗರಾಗುವಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.
2020ರ ಡಿಸೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ರಿಷಭ್ ಪಂತ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ತದ ನಂತರ ಅದೇ ತಿಂಗಳು 30 ರಂದು ತಮ್ಮ ತವರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಭೀಕರ ಅಪಘಾತಕ್ಕೆ ಒಳಗಾಗಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಅವರು ಪಾರಾಗಿದ್ದರು.
“ನಾನು ರಿಷಭ್ ಪಂತ್ ಅವರನ್ನು ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಎಂದು ಪರಿಗಣಿಸುತ್ತೇನೆ. ಅವರು ಇದೀಗ ಭಾರತ ಟೆಸ್ಟ್ ತಂಡಕ್ಕೆ ಮರಳಿರುವುದರಿಂದ ನನಗೆ ಯಾವುದೇ ರೀತಿಯ ಅಚ್ಚರಿ ಇಲ್ಲ ಹಾಗೂ ಅವರು ಭಾರತ ಟೆಸ್ಟ್ ತಂಡದ ಪರ ಆಡುವುದನ್ನು ಮುಂದುವರಿಸಲಿ,” ಎಂದು ಸೌರವ್ ಗಂಗೂಲಿ ಶುಭ ಹಾರೈಸಿದ್ದಾರೆ.
“ರಿಷಭ್ ಪಂತ್ ಅವರು ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿದರೆ, ಅಬರು ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗನಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಅಲ್ಪ ಅವಧಿಯ ವೃತ್ತಿ ಜೀವನದಂತೆ ದೀರ್ಘಾವಧಿಯಲ್ಲಿಯೂ ಅತ್ಯುತ್ತಮ ಬ್ಯಾಟ್ಸ್ಮನ್ ಆಗಬೇಕೆಂಬುದು ನನ್ನ ಆಶಯ. ಅವರಲ್ಲಿನ ಪ್ರತಿಭೆ ಮತ್ತು ಸಮಯವನ್ನು ಸದುಪಯೋಗಪಡಿಸಿಕೊಂಡರೆ ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರಲಿದ್ದಾರೆ,” ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ ತಿಳಿಸಿದ್ದಾರೆ.