ಬೆಂಗಳೂರು: ಅಫಘಾನಿಸ್ತಾನ ವಿರುದ್ಧ ನಡೆದ ಡಬ್ಬಲ್ ಸೂಪರ್ ಓವರ್ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಪಂದ್ಯ ಗೆಲ್ಲುವಲ್ಲಿ ಯುವ ಫಿನಿಷರ್ ರಿಂಕು ಸಿಂಗ್ ಮಹತ್ತರ ಪಾತ್ರ ವಹಿಸಿದ್ದರು. ತಮ್ಮ ಹಾಗೂ ನಾಯಕ ರೋಹಿತ್ ಶರ್ಮಾ ಜೊತೆಯಾಟದಲ್ಲಿ ಮೂಡಿಬಂದ ಅಜೇಯ190 ರನ್ ಗಳ ವಿಶ್ವದಾಖಲೆಯ ಬಗ್ಗೆ ಯುವ ಎಡಗೈ ಆಟಗಾರ ಸಂತಸ ವ್ಯಕ್ತಪಡಿಸಿದ್ದಾರೆ.
ಜನವರಿ 17( ಬುಧವಾರ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫಘಾನಿಸ್ತಾನ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ, 22 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದ ಸುಳಿಗೆ ಸಿಲುಕಿತ್ತು. ಆದರೆ 5ನೇ ವಿಕೆಟ್ ಗೆ ಜೊತೆಗೂಡಿದ ರೋಹಿತ್ ಶರ್ಮಾ ಹಾಗೂ ರಿಂಕು ಸಿಂಗ್ ಜೋಡಿ ಮುರಿಯದ 190 ರನ್ ಗಳ ಜೊತೆಯಾಟದಿಂದ ತಂಡದ ಮೊತ್ತವನ್ನು 212 ರ ಗಡಿ ಮುಟ್ಟಿಸಿದ್ದರು. ನಾಯಕನ ಜೊತೆಗಿನ ಮಾಸ್ಟರ್ ಕ್ಲಾಸ್ ಆಟದ ಬಗ್ಗೆ ಐಪಿಎಲ್ ತಾರೆ ಸಂತಸ ವ್ಯಕ್ತಪಡಿಸಿದ್ದಾರೆ.
“ರೋಹಿತ್ ಭಯ್ಯ ಜೊತೆಗಿನ ಪ್ರತಿ ಕ್ಷಣದ ಆಟವನ್ನು ಆನಂದಿಸಿ ಕಲಿಯುವಂತಿತ್ತು. ಅದರಲ್ಲೂ ಪಂದ್ಯದ ಮಧ್ಯಮದ ಓವರ್ ಗಳಲ್ಲಿ ಅವರೊಂಗಿದ್ದ ಕ್ಷಣ ಆನಂದ ಹಾಗೂ ಮನರಂಜನೆಯಿಂದ ಕೂಡಿತ್ತು. ಸರಣಿ ಗೆದ್ದಿರುವುದು ನಿಜಕ್ಕೂ ವೈಭವವೆನಿಸಿದೆ” ಎಂದು ರಿಂಕು ಸಿಂಗ್ ಇನ್ಸ್ಟಾಗ್ರಾಮ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.