ಧಾರವಾಡ : ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅದನ್ನು ಸಂಪೂರ್ಣವಾಗಿ ತೊಲಗಿಸಲು ಪ್ರತಿ ವರ್ಷ ಫೆ.೨೦ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ ಎಂದು ಹಿರಿಯ ನ್ಯಾಯಾಧೀಶರಾದ ರವೀಂದ್ರ ಹೋನಲೆ ಹೇಳಿದರು. ಪಟ್ಟಣದ ನೌಕರರ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹಾಗೂ ತಾಲೂಕ ಸಮಾಜ ಕಲ್ಯಾಣ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನ ಮತ್ತು ಅಸ್ಪೃಶ್ಯತಾ ನಿವಾರಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತದಲ್ಲಿ ಸಾಮಾಜಿಕ ನ್ಯಾಯ ಎಂಬ ಕಲ್ಪನೆ ಮತ್ತು ಹೋರಾಟ ಬಾಬಾಸಾಹೇಬ ಅಂಬೇಡ್ಕರ್ ಅವರಿಂದ ಆರಂಭವಾಯಿತು ಎಂದು ಹೇಳಿದರೂ ಅದು ರಾಜಕೀಯ ಮತ್ತು ಕಾನೂನಾತ್ಮಕ ನೆಲೆಯಲ್ಲಿ ನಡೆದಂತಹದು. ಆದರೆ, ೧೨ನೇ ಶತಮಾನದಲ್ಲಿಯೇ ಬಸವೇಶ್ವರರು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದರು ಎಂದರು.
ನ್ಯಾಯಾಧೀಶರಾದ ಗಣೇಶ್ ಎನ್ ಮಾತನಾಡಿ ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ ಹಾಗೂ ಸಂವಿಧಾನ ವಿರೋಧಿ ಕೃತ್ಯ. ಕಾನೂನು ರೀತಿಯಿಂದ ಶಿಕ್ಷಾರ್ಹ ಅಪರಾಧ. ಆದ್ದರಿಂದ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಪರಸ್ಪರ ಗೌರವಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಅಮಾನವೀಯ ವರ್ತನೆಗಳು ಮಾನವ ಸಮಾಜದ ವಿಘಟನೆಗೆ ಕಾರಣವಾಗುತ್ತವೆ. ಶಾಂತಿಯುತ ಸಹಬಾಳ್ವೆಗೆ ಅಸ್ಪೃಶ್ಯತೆ ಹೋಗಬೇಕು ಎಂದು ಸಲಹೆ ನೀಡಿದರು.
ಕಸಾಪ ತಾಲೂಕ ಅಧ್ಯಕ್ಷ ರಮೇಶ ಸೋಲಾರಗೋಪ್ಪ ಭಾರತೀಯ ಶತಶತಮಾನಗಳಿಂದ ಮಾತನಾಡಿ ಸಮಾಜದಲ್ಲಿ ಅಳವಾಗಿ ಬೇರು ಬಿಟ್ಟಿರುವ ಜಾತಿ ಪದ್ಧತಿ ಇಂದಿಗೂ ಜೀವಂತವಾಗಿರುವುದು ವಿಪರ್ಯಾಸ, ಅಸ್ಪೃಶ್ಯತೆ, ಮೇಲು ಕೀಳು ತಾರತಮ್ಯ ಹೋಗಲಾಡಿಸಲು ಬುದ್ಧ, ಬಸವ, ಅಂಬೇಡ್ಕರ್ ಮತ್ತಿತರ ಸಮಾಜ ಸುಧಾರಕರು ಶ್ರಮಿಸಿದರೂ ಜಾತಿ ಪದ್ಧತಿ ಮುಂದುವರಿದಿದೆ. ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಎ ಜೆ ಯೋಗಪ್ಪನವರ್ , ಸರ್ಕಾರಿ ಅಭಿಯೋಜಕರಾದ ಶಶಿಕಲಾ ಶಿವಣ್ಣವರ, ತಾ ಪಂ ಇಓ ಪಿ ವೈ ಸಾವಂತ, ಪಿ ಎಸ್ ಐ ಕರಿವೀರಪ್ಪನವರ್, ರಾಕೇಶ ಅಳಗವಾಡಿ, ರವೀಂದ್ರ ತೋಟಗಂಟಿ, ಶೋಭಾ ಬಳಿಗೇರ, ಆರ್ ಎಂ ಬಾಬಜಿ, ಮಾಲಾ ತುರಿಹಾಳ, ಮಂಜುನಾಥ ಚೌದರಿ, ದಲಿತ ಮುಖಂಡರಾದ ಮಂಜುನಾಥ್ ಮಾದರ, ಹನುಮಂತ ಕಾಳೆ, ಮೇತ್ರಿ, ಸೇರಿದಂತೆ ವಿಧ ಇಲಾಖೆಯ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರತಿನಿಧಿಗಳು ಉಪಸ್ಥಿತರಿದ್ದರು.