ರಾಯಪುರ: ಛತ್ತೀಸಗಢದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುವುದು ನಿಚ್ಚಳವಾಗಿದೆ. ಈ ಹೊತ್ತಿನಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಗೆಲುವಿನ ಹಿಂದಿನ ಕುತೂಹಲಕಾರಿ ವಿಷಯವೊಂದನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಕಿರುವ ಪೋಸ್ಟ್ ವೈರಲ್ ಆಗಿದೆ.
ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಬಿ.ಎಲ್.ಸಂತೋಷ್, ಈತ ಈಶ್ವರ್ ಸಾಹು. ಛತ್ತೀಸಗಢ ರಾಜ್ಯದ ಬಿಜೆಪಿ ಅಭ್ಯರ್ಥಿ. 7 ಬಾರಿ ಗೆದ್ದಿದ್ದ ಕಾಂಗ್ರೆಸ್ ಶಾಸಕ ರವೀಂದ್ರ ಚೌಬೆ ಅವರನ್ನು ಸಾಹು ಸೋಲಿಸಿದ್ದಾರೆ. ಈ ವ್ಯಕ್ತಿಯ ಮಗ ಗುಂಪು ಹಿಂಸಾಚಾರದಲ್ಲಿ ಹತ್ಯೆಗೀಡಾಗಿದ್ದರು. ಆ ಗಲಭೆಕೋರರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಇಂದು ಸಾಹು ಪ್ರಜಾಪ್ರಭುತ್ವ ಯುದ್ಧದಲ್ಲಿ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ತಮ್ಮ ಮಗನಿಗಾದ ಅನ್ಯಾಯಕ್ಕಾಗಿ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ಛತ್ತೀಸ್ಗಢದ ಸಾಜಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರ್ ಸಾಹು ಅವರ ಆಸೆ ಕೊನೆಗೂ ನೆರವೇರಿದೆ. ಸತತ ಏಳು ಭಾರಿ ಗೆದ್ದು ಶಾಸಕರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಚೌಬೆಯನ್ನು ಬಿಜೆಪಿ ಅಭ್ಯರ್ಥಿ ಸಾಹು ಮಣಿಸಿದ್ದಾರೆ. ಈಶ್ವರ್ ಸಾಹು 5196 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಈಶ್ವರ್ ಸಾಹು ಅವರ ಮಗ ಹಿಂಸಾಚಾರದಲ್ಲಿ ಕಿಡಿಗೇಡಿಗಳ ಗುಂಪಿನಿಂದ ಹತ್ಯೆಗೀಡಾಗಿದ್ದರು. ಹತ್ಯೆಗೈದ ಗುಂಪಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಇದರಿಂದ ಬೇಸತ್ತಿದ್ದ ಸಾಹು ಅವರು ಕಾಂಗ್ರೆಸ್ ವಿರುದ್ಧ ಪ್ರಜಾಪ್ರಭುತ್ವದ ಮಾರ್ಗದಲ್ಲೇ ಹೋರಾಟ ನಡೆಸಲು ಮುಂದಾಗಿದ್ದರು. ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದ್ದು, ತಮಗಾದ ಅನ್ಯಾಯದ ವಿರುದ್ಧ ಸಿಡಿದು ಗೆಲುವು ಸಾಧಿಸಿದ್ದಾರೆ.