ಬೆಂಗಳೂರು:-;ವಯಸ್ಸಾದ ತಂದೆ-ತಾಯಿ ನೋಡಿಕೊಳ್ಳುವುದು ಮಕ್ಕಳ ಜವಬ್ದಾರಿ ಎಂದು ಹೈಕೋರ್ಟ್ ಹೇಳಿದೆ.
ಜೀವನದ ಸಂಧ್ಯಾಕಾಲದಲ್ಲಿರುವ ಪೋಷಕರನ್ನು ಆರೈಕೆ ಮಾಡುವ ಜವಾಬ್ದಾರಿಯನ್ನು ಕಾನೂನು, ಧರ್ಮ ಮತ್ತು ನೈತಿಕತೆಯು ಮಕ್ಕಳ ಮೇಲೆ ಹೇರುತ್ತದೆ. ಪೋಷಕರ ಆಸ್ತಿಯನ್ನು ಮಕ್ಕಳು ಉಡುಗೊರೆಯಾಗಿ ಪಡೆದಾಗ ಈ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತಂದೆಯಿಂದ ಆಸ್ತಿಯನ್ನು ಗಿಫ್ಟ್ ಡೀಡ್ ಆಗಿ ಪಡೆದಿರುವುದನ್ನು ಅಮಾನ್ಯಗೊಳಿಸಿದ್ದ ತುಮಕೂರು ವಲಯದ ‘ಪೋಷಕರ ಕಲ್ಯಾಣ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಕಾಯ್ದೆಯಡಿಯ ನ್ಯಾಯಾಧಿಕರಣ’ದ ಉಪ ವಿಭಾಗಾಧಿಕಾರಿಯ ಆದೇಶ ಮತ್ತು ಅದನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠ ಪುರಸ್ಕರಿಸಿದೆ.
ವಯಸ್ಸಾದ ತಂದೆ ಮತ್ತು ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆಗಾರಿಕೆಯಾಗಿದೆಯೇ ಹೊರತು ದಯೆ-ದಾನದ ವಿಚಾರವಲ್ಲ. ವೃದ್ಧಾಪ್ಯ ತಂದೆ-ತಾಯಿಯನ್ನು ಆರೈಕೆ ಮಾಡುವುದು ಮಕ್ಕಳ ಶಾಸನಬದ್ಧ ಜವಾಬ್ದಾರಿ. ‘ರಕ್ಷಂತಿ ಸ್ಥಾವಿರೇ ಪುತ್ರ’ ಎಂದು ಸಹಸ್ರಾರು ವರ್ಷಗಳಿಂದ ಈ ದೇಶದ ಧರ್ಮಗ್ರಂಥಗಳು ಸಾರುತ್ತವೆ. ಜೀವನ ಸಂಧ್ಯಾಕಾಲದಲ್ಲಿರುವ ತಂದೆ-ತಾಯಿಯನ್ನು ಮಕ್ಕಳು ನೋಡಿಕೊಳ್ಳುವುದೇ ಧರ್ಮ ಎನ್ನುವುದೇ ಅದರ ಅರ್ಥ ಎಂದು ಹೈಕೋರ್ಟ್ ಉಲ್ಲೇಖಿಸಿತು.