ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ರಕ್ಷಣೆ ಮಾಡಲು ಇಂದಿನ ಕ್ಯಾಬಿನೆಟ್ನಲ್ಲಿ (Cabinet) ರಾಜ್ಯಪಾಲರ ವಿರುದ್ದ ನಿರ್ಣಯ ಅಂಗೀಕಾರ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಅಶೋಕ್ (R Ashok) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು,ಕ್ಯಾಬಿನೆಟ್ ಮಂತ್ರಿಗಳು ಸಿದ್ದರಾಮಯ್ಯ ರಕ್ಷಣೆ ನಿಂತಿದ್ದಾರೆ. ದೂರು ಕೊಟ್ಟಾಗ ಅದಕ್ಕೆ ವಿವರಣೆ ಕೇಳುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಹೀಗೆ ಕೇಳಬೇಕು ಅಂದರೆ ಆಗುತ್ತಾ? ರಾಜ್ಯಪಾಲರು ನೋಟಿಸ್ ಕೊಡುವಾಗ ಕಾನೂನು ನೋಡಿ ಕೊಟ್ಟಿರುತ್ತಾರೆ. ಅದನ್ನ ಪ್ರಶ್ನೆ ಮಾಡಿದ್ರೆ ಕಾನೂನುಗಿಂತ ನೀವು ದೊಡ್ಡವರಾ? ಕ್ಯಾಬಿನೆಟ್ ಕರೆದು ರಾಜ್ಯಪಾಲರ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಅಂತ ಕಿಡಿಕಾರಿದರು.
ಸಂವಿಧಾನದ ಪ್ರಕಾರ ರಾಜ್ಯಕ್ಕೆ ಸುಪ್ರೀಂ ರಾಜ್ಯಪಾಲರು. ಅವರಿಗೆ ಕಾನೂನು ಹೇಳಿಕೊಡಲು ಹೋಗ್ತೀರಾ? ಇದರಿಂದ ನೀವು ತಪ್ಪು ಮಾಡಿದ್ದೀರಾ ಅಂತ ಅಗುತ್ತದೆ. ಏನು ತಪ್ಪು ಮಾಡಿಲ್ಲ ಅಂದರೆ ಯಾಕೆ ಅಧಿವೇಶನದಲ್ಲಿ ಚರ್ಚೆ ಮಾಡಲಿಲ್ಲ. ಸಿಎಂ ಅವರು ದಾಖಲೆ ಸಮೇತ ಅಲ್ಲೇ ಎಲ್ಲವನ್ನು ಹೇಳಬಹುದಿತ್ತು. ಆದರೆ ಸಿದ್ದರಾಮಯ್ಯ ಅಂದು ಹೇಡಿ ತರಹ ಓಡಿ ಹೋಗಿದ್ದಾರೆ. ಇವರು ತಪ್ಪು ಮಾಡಿಲ್ಲ ಅಂದರೆ ಸರ್ಕಾರ ಅಸ್ಥಿರ ಆಗುತ್ತೆ ಅಂತ ಯಾಕೆ ಭಯ ಬೀಳ್ತಾರೆ ಅಂತ ವಾಗ್ದಾಳಿ ನಡೆಸಿದರು.