ನವ ದೆಹಲಿ ನ 24 ;ಕರ್ನಾಟಕ ರಾಜ್ಯದಲ್ಲಿ ಬರಪರಿಸ್ಥಿತಿ ತಲೆದೋರಿದ್ದು ಶೀಘ್ರ ಪರಿಹಾರ ಧನ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಲಾಗಿದೆ. ಬಿಡುಗಡೆ ಮಾಡಿದ ಹಣವನ್ನು ಪಾರದರ್ಶಕವಾಗಿ, ಶೀಘ್ರವಾಗಿ, ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ಸಚಿವರಾದ ಕೃಷ್ಣಾ ಬೈರೇಗೌಡ ತಿಳಿಸಿದರು.
ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಜತೆಗೂಡಿ ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚೆ ನಡೆಸಿದ ನಂತರ ಅವರು ಸುದ್ದಿಗಾರರಿಗೆ ಇಂದಿನ ಭೇಟಿಯ ಬಗ್ಗೆ ಮಾಹಿತಿ ಒದಗಿಸಿದರು..
2015 ರ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ಶೇ 44 ರಷ್ಟಿದ್ದಾರೆ ಎಂಬ ಮಾಹಿತಿ ಇದೆ. 2015 ರ ಅಂಕಿ ಸಂಖ್ಯೆ ಪ್ರಕಾರ ಬರ ಪರಿಹಾರ ಬಿಡುಗಡೆ ಮಾಡಿದರೆ ರಾಜ್ಯದ ರೈತರಿಗೆ ಅನ್ಯಾಯವಾಗುತ್ತದೆ.
ಕಿಸಾನ್ ಸಮ್ಮಾನ್ ಹಾಗೂ ರಾಜ್ಯ ಸರ್ಕಾರದ ಫ್ರೂಟ್ ಐಡಿ ನೊಂದಣಿ ಪ್ರಕಾರ ರಾಜ್ಯದಲ್ಲಿ ಶೇ 70 ಕ್ಕಿಂತಲೂ ಅಧಿಕ ಪ್ರಮಾಣದ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ..ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಬರ ಪರಿಹಾರ ಹಣ ಬಿಡುಗಡೆಯಾದರೆ ಸುಮಾರು 1500 ಕೋಟಿ ಹಣ ವ್ಯತ್ಯಾಸ ವಾಗಿ ರಾಜ್ಯದ ರೈತರಿಗೆ ಅನ್ಯಾಯವಾಗುತ್ತೆ ಎಂಬುದನ್ನು ಕೇಂದ್ರ ಹಣಕಾಸು ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಅಲ್ಲದೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ರೈತರ ಬೆಳೆ ವಿಮೆ ಹಣ ಬಿಡುಗಡೆ ಮಾಡಲು ವಿಮಾ ಕಂಪನಿಗಳು ತಡ ಮಾಡುತ್ತಿರುವ ಹಿನ್ನಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು ವಿಮಾ ಕಂಪನಿಗಳಿಗೆ ಶೀಘ್ರವಾಗಿ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರಿಗೆ ಒತ್ತಾಯ ಮಾಡಿದ್ದಾರೆ.ಈ ಹಿನ್ನಲೆಯಲ್ಲಿ ವಿಮಾ ಕಂಪನಿಗಳಿಗೆ ರೈತರ ಬೆಳೆ ವಿಮೆ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸೂಚನೆ ನೀಡುವುದಾಗಿ ನಿರ್ಮಲಾ ಸೀತಾರಮನ್ ಅವರು ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.
ಇದಲ್ಲದೆ ಕೃಷಿ ಸಚಿವರಾದ ಎನ್ .ಚಲುವರಾಯಸ್ವಾಮಿ ಅವರು 2023 ರನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿರುವ ಹಿನ್ನಲೆ ರೈತರ ಬೆಳೆದ ಸಿರಿಧಾನ್ಯಗಳಿಗೆ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡುವುದರ ಮೂಲಕ ರೈತರಿಗೆ ಸಿರಿಧಾನ್ಯ ಬೆಳೆ ಬೆಳೆಯಲು ಉತ್ತೇಜನ ನೀಡಿದಂತಾಗುತ್ತದೆ ಹಾಗೂ ಬೆಳೆ ಬೆಳೆಯುವ ವಿಸ್ತೀರ್ಣ ಸಹ ಹೆಚ್ಚಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದರು. ನಿರ್ಮಲಾ ಸೀತಾರಾಮನ್ ಅವರು ಸಕಾರಾತ್ಮಕ ಸ್ಪಂದನೆ ನೀಡಿ
ಬೆಂಬಲ ಬೆಲೆ ನಿಗದಿ ಮಾಡುವ ಬಗ್ಗೆಯೂ ಭರವಸೆ ನೀಡಿದರು ಎಂದು ಕೃಷ್ಣಾ ಬೈರೇಗೌಡ ಸುದ್ದಿಗಾರರಿಗೆ ಮಾಹಿತಿ ನೀಡಿದರು..