ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ನ 17 ಸದಸ್ಯರು ಏಳು ತಿಂಗಳು ಜೈಲು ವಾಸ ಅನುಭವಿಸಿ ಹೊರ ಬಂದಿದ್ದಾರೆ. ಈ ಮಶ್ಯೆ ದರ್ಶನ್ ಅವರಿಗೆ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು , ದರ್ಶನ್ಗೆ ನೀಡಿರುವ ಬೇಲ್ ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರಿ ಪೊಲೀಸರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದ್ದು ಇದು ದರ್ಶನ್ ಗೆ ಮತ್ತಷ್ಟು ತಲೆನೋವು ತಂದೊಡ್ಡಿದೆ.
ನಟಿ ಹಾಗೂ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರನ್ನು ಬಂಧಿಸಲಾಗಿತ್ತು. ಈ ಮಧ್ಯೆ ಬೆನ್ನು ನೋವಿನ ಹಿನ್ನೆಲೆಯಲ್ಲಿ ದರ್ಶನ್ ಮೆಡಿಕಲ್ ಬೇಲ್ ಪಡೆದು ಹೊರ ಬಂದಿದ್ದರು. ಬಳಿಕ ಪ್ರಕಣದ ಎಲ್ಲಾ ಆರೋಪಿಗಳಿಗೂ ಜಾಮೀನು ನೀಡಲಾಗಿತ್ತು.
ಜಾಮೀನು ಸಿಗುತ್ತಿದ್ದಂತೆ ನಟ ದರ್ಶನ್ ನ್ಯಾಯಾಲಯದಿಂದ ಅನುಮತಿ ಪಡೆದು ಮೈಸೂರಿನ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲದೇ, ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ಗೂ ದರ್ಶನ್ ತೆರಳಿದ್ದರು. ಈಗ ಕೋರ್ಟ್ ಅನುಮತಿ ನೀಡಿದ್ದ ಅವಧಿ ಮುಕ್ತಾಯ ಆದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ವಾಪಸಾಗಿದ್ದಾರೆ. ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಆಧಾರದ ಮೇಲೆ ದರ್ಶನ್ ಹಾಗೂ ಇತರೆ ಆರೋಪಿಗಳ ಭವಿಷ್ಯ ನಿರ್ಧಾರ ಆಗಲಿದ್ದು ದರ್ಶನ್ ಮುಂದೇನು ಎಂಬ ಟೆನ್ಷನ್ ನಲ್ಲಿದ್ದಾರೆ.